ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯ ಮುಖಂಡ ಅನೀಲ್ ಹೊಸಮನಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಮತ್ತಷ್ಟು ಚುರುಕು ನೀಡಲಾಗುತ್ತಿದ್ದು, ಡಿ.೧ ರಂದು ೨೫ ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯ ಅನೀಲ್ ಹೊಸಮನಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಯಾದರೆ ಬಡವರಿಗೆ ಆರೋಗ್ಯ ಹಾಗೂ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಎರಡೂ ಗಗನಕುಸುಮ, ಹೀಗಾಗಿ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಮ್ಮ ಹೋರಾಟ ನಡೆದಿದೆ, ಇದು ಜನರ ಹೋರಾಟ, ಜನಪರವಾದ ಹೋರಾಟ, ಕಳೆದ ಸೆಪ್ಟೆಂಬರ್ ೧೮ ರಿಂದ ಹೋರಾಟ ಆರಂಭವಾಗಿದೆ, ಕಳೆದ ೭೨ ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದೆ, ಎಲ್ಲ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿವೆ ಎಂದರು.
ಡಿ.೧ ರ ಹೋರಾಟ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದ್ದು, ವಿವಿಧ ಕಾರ್ಮಿಕ, ಮಹಿಳಾ, ವಿದ್ಯಾರ್ಥಿಗಳು, ದಲಿತ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಈಗಾಗಲೇ ಸಕ್ರಿಯವಾಗಿ ಸಿದ್ಧತೆಯಲ್ಲಿ ತೊಡಗಿದ್ದು, ವ್ಯಾಪಾರಸ್ಥರು ಸೇರಿದಂತೆ ಎಲ್ಲೆಡೆ ಜನಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ಇಬ್ಬರು ಸಚಿವರು ಹಾಗೂ ಇಬ್ಬರು ಶಾಸಕರು ಈಗಾಗಲೇ ಈ ವಿಷಯಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೆ, ನಾಲ್ವರು ಶಾಸಕರು ಇದುವರೆಗೂ ಯಾಕೆ ಬೆಂಬಲ ಕೊಡುತ್ತಿಲ್ಲ ಎಂಬುದು ಗೊತ್ತಿಲ್ಲ. ಅಧಿವೇಶನದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಪರವಾಗಿ ಧ್ವನಿ ಎತ್ತಬೇಕು. ಮುಂದಿನ ದಿನಗಳಲ್ಲಿ ಶಾಸಕರ, ಸಚಿವರ ಮನೆ ಮುಂದೆ ಧರಣಿ ಕೂರುವ ಹೋರಾಟ ನಡೆಸಲಾಗುವುದು ಎಂದರು.
ಹೋರಾಟಗಾರ ಬಿ.ಭಗವಾನ್ ರೆಡ್ಡಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಎಲ್ಲ ಸೌಕರ್ಯ ಇದೆ. ಆದರೆ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವೈದ್ಯಕೀಯ ಕಾಲೇಜು ಬರುವಲ್ಲಿ ಹಿನ್ನಡೆ ಆಗುತ್ತಿದೆ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಮಾಡಿದರೆ, ಇದಕ್ಕೆ ೬೦, ೯೦ ವರ್ಷಗಳ ಕಾಲ ಒಪ್ಪಂದ ಇರುತ್ತದೆ. ಒಮ್ಮೆ ಈ ಒಪ್ಪಂದ ಮಾಡಿಕೊಂಡರೆ, ಬಳಿಕ ಸರ್ಕಾರ ಸಹ ಮಧ್ಯಪ್ರದೇಶ ಮಾಡಲು ಸಹ ಸಾಧ್ಯವಾಗುವುದಿಲ್ಲ. ಅಲ್ಲದೇ, ಸಚಿವರ ಮಾತಿಗೂ ಕೃತಿಗೂ ವ್ಯತ್ಯಾಸ ಇದೆ. ಹೀಗಾಗಿ ಜನಪ್ರತಿನಿಧಿಗಳು ಸರ್ಕಾರದಿಂದಲೇ ವೈದ್ಯಕೀಯ ಕಾಲೇಜು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಮ್ಮ ಹೋರಾಟಕ್ಕೆ ಜನಪ್ರತಿನಿಧಿಗಳು ಬೆಂಬಲ ಕೊಡಬೇಕು.
ನಗರ ಶಾಸಕರು ದೇಶ, ವಿದೇಶಗಳ ಬಗ್ಗೆ ಮಾತನಾಡುತ್ತಾರೆ. ತಮ್ಮದೇ ಮತಕ್ಷೇತ್ರದ ವಿಷಯ ಮುಂದಿಟ್ಟುಕೊಂಡು ಹೋರಾಟ ನಡೆಯುತ್ತಿದ್ದರೂ ಒಂದೂ ಮಾತನಾಡುತ್ತಿಲ್ಲ ಎಂದರು.
ಮುಖಂಡರಾದ ಅಕ್ರಂ ಮಾಶ್ಯಾಳಕರ, ಭರತ ಕುಮಾರ್ ಎಚ್.ಟಿ., ಸಿದ್ದಲಿಂಗ ಬಾಗೇವಾಡಿ, ಮಲ್ಲಿಕಾರ್ಜುನ ಬಟಗಿ, ಶ್ರೀನಾಥ ಪೂಜಾರಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ರಾಹುಲ್ ಭೇಟಿಗೆ ಪ್ರಯತ್ನ
ಸಿಎಂ ಭೇಟಿ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಬೆಂಗಳೂರಿಗೆ ಕರೆದುಕೊಂಡು ಹೋದರು. ಬಹಳ ಗೌರವದಿಂದಲೇ ಸಚಿವರು ನಡೆದುಕೊಂಡರು. ಆದರೆ, ಸಿಎಂ ಭೇಟಿ ಸಮಯದಲ್ಲಿ ಅವರು ಯಾವುದೇ ಮಾತನಾಡಲಿಲ್ಲ. ಸಿಎಂ ಜತೆಗೆ ಚರ್ಚಿಸಲು ಸಮಯವೂ ಸಿಗಲಿಲ್ಲ. ಜನತಾ ದರ್ಶನದಲ್ಲಿ ಮನವಿ ಸ್ವೀಕರಿಸುವಂತೆ ಸಿಎಂ ನಮ್ಮ ಮನವಿ ಸ್ವೀಕರಿಸಿದರು. ಇದರಿಂದ ನಿರಾಸೆಯಿಂದ ವಾಪಸ್ ಬರುವಂತಾಗಿದೆ. ಹೀಗಾಗಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಒಂದು ವಾರದಲ್ಲಿ ಭೇಟಿಯ ಸಮಯ ನಿಗದಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯ ಅನೀಲ್ ಹೊಸಮನಿ ಹೇಳಿದರು.

