ಸಂಗಮೇಶ್ವರ ಪಿಯು ಕಾಲೇಜಿನಲ್ಲಿ ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಚಡಚಣ: “ಮನೆಯಲ್ಲಿ ಇರುವ ಹಿರಿಯರನ್ನು ಪ್ರೀತಿಸಿ, ಅವರ ಅಗತ್ಯಗಳಿಗೆ ಸ್ಪಂದಿಸುವುದು ಕುಟುಂಬದ ಕಿರಿಯರ ಮತ್ತು ಹಿರಿಯರ ಇಬ್ಬರ ಜವಾಬ್ದಾರಿ. ಯುವ ಪೀಳಿಗೆ ಹಿರಿಯರ ಅನುಭವಗಳನ್ನು ಗೌರವಿಸಿ, ಅವರ ಜೀವನ ಮೌಲ್ಯಗಳಿಂದ ಕಲಿಯಬೇಕು,” ಎಂದು ವಿಜಯಪುರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಹಾಗೂ ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಪ್ರೊ. ಆರ್.ಸಿ. ಹಿರೇಮಠ ಹೇಳಿದರು.
ಚಡಚಣದ ಸಂಗಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕರ್ನಾಟಕ ಸರ್ಕಾರಿ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಹಿರಿಯ ನಾಗರಿಕರ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಅಂತರ ಪೀಳಿಗೆ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
“ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಇಂದಿನ ಯುವಕರು ಹಿರಿಯರ ಬಗ್ಗೆ ನಿರ್ಲಕ್ಷ್ಯ ಮತ್ತು ತಾತ್ಸಾರಭಾವವನ್ನು ಹೊಂದುತ್ತಿರುವುದು ದುರದೃಷ್ಟಕರ. ಇಂತಹ ಅನಾರೋಗ್ಯಕರ ಮನೋಭಾವ ಬೆಳೆಸದಂತೆ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ,” ಎಂದು ಅವರು ತಿಳಿಸಿದರು.
ಉಪನ್ಯಾಸಕ ಎಸ್.ಜಿ. ಕುಂಬಾರ ಹಿರಿಯರ ಮಾರ್ಗದರ್ಶನ, ಆಶೀರ್ವಾದ ಮತ್ತು ಜೀವನಪಾಠಗಳ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಮನುಜ ಕಟಗೇರಿ ಮಾತನಾಡಿ, “ಹಿರಿಯರ ಸೇವೆ ಮಾಡಿದಾಗ ಜೀವನ ತೃಪ್ತಿಕರವಾಗುತ್ತದೆ. ಯುವಕರು ಹಿರಿಯರನ್ನು ಭಾರವೆಂದು ನೋಡುವ ಬದಲು, ಅವರಿಗಿರುವ ಮೌಲ್ಯವನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಹೇಳಿದರು.
ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಎಸ್.ವಿ. ಕುಸೂರ ಸ್ವಾಗತಿಸಿದರು. ಎಚ್.ಎಸ್. ಮಕಾನದಾರ ಕಾರ್ಯಕ್ರಮ ನಿರ್ವಹಿಸಿದರು.

