ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕದಂಬ ಸೈನ್ಯ ವಿಜಯಪುರ ಘಟಕದಿಂದ ದ್ವಿಭಾಷಾ ನೀತಿ ಕಡ್ಡಾಯವಾಗಿ ಜಾರಿಗೆ ಹಾಗೂ ಕನ್ನಡ ಕನ್ನಡಿಗರನ್ನು ನಿಂದಿಸುವವರ, ದೌರ್ಜನ್ಯ ಪುಂಡಾಟಿಕೆ ನಡೆಸುವವರ ವಿರುದ್ಧ ನಾಡದ್ರೋಹ ಕಾಯ್ದೆ ಜಾರಿಗೆ, ಕನ್ನಡಿಗರ ಉದ್ಯೋಗ ದಾತೆ ೨೦೧೭ ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಮೂಲಕ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ನೇತ್ರತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ನಂತರ ಕದಂಬ ಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತಂದಿದೆ. ಆದರೆ ಕನ್ನಡ ಕಡ್ಡಾಯ ಇಲ್ಲ, ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ವಿದ್ಯಾರ್ಥಿಗಳು ತಮ್ಮ ತಮ್ಮ
ಮಾತೃ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ನೂತನ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ, ಇದರಿಂದ ಹಾಲಿ ಇರುವ ತ್ರಿಭಾಷಾ ಸೂತ್ರಕ್ಕೆ ರಾಜ್ಯ ಶಿಕ್ಷಣ ನೀತಿ ಅವಕಾಶ ಕಲ್ಪಿಸಿರುವದನ್ನು ರದ್ದುಮಾಡಿ ತಮಿಳುನಾಡಿನಲ್ಲಿ ದ್ವಿಭಾಷಾ ನೀತಿ ಜಾರಿಗೆ ತಂದಿರುವಂತೆ ನಮ್ಮ ರಾಜ್ಯದಲ್ಲಿ
ಕಡ್ಡಾಯವಾಗಿ ತರಬೇಕು ಎಂದು ಆಗ್ರಹಿಸಿದರು.
ಹಿಂದಿ ಸಾಮ್ರಾಜ್ಯಶಾಹಿಯ ಕರಳಾಮುಖ, ಕನ್ನಡದ ಕತ್ತು ಹಿಸುಕುತ್ತಿದೆ, ತ್ರಿಭಾಷಾ ಸೂತ್ರವೋ ತ್ರಿಶೂಲವೋ, ಕೇಂದ್ರ ರ‍್ಕಾರದ ಎಲ್ಲಾ ಇಲಾಖೆಗಳಲ್ಲಿ ಬ್ಯಾಂಕಗಳಲ್ಲಿ ಹಿಂದಿ ಭಾಷಿಕರನ್ನು ತುಂಬುತ್ತಿದ್ದಾರೆ. ಕನ್ನಡಿಗರ ಉದ್ಯೋಗದಾತೆ ೨೦೧೭ ರ ಡಾ ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಸದನದಲ್ಲಿ ಮಂಡಿಸಿ ಜಾರಿಗೆ ತರಲು ಇಚ್ಚಾಶಕ್ತಿ ತೋರುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದರು.
ತ್ರಿಶಂಕು ಸ್ಥಿತಿಯಲ್ಲಿ ಕನ್ನಡ ಶಾಲೆಗಳು- ದುಸ್ಥಿತಿಯಲ್ಲಿ ಇರುವ ಜ್ಞಾನ ದೇಗುಲಗಳು ಗ್ಯಾರಂಟಿ ಯೋಜನೆಗೆ ಸೇರಿಸಬೇಕು, ಕನ್ನಡ, ಕನ್ನಡಿಗರನ್ನು ಸಾವ೯ಜನಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವುವರ ವಿರುದ್ಧ ನಾಡ ದ್ರೋಹ ಕಠಿಣ ಕಾನೂನು ಜಾರಿಗೆ ತರಲೇಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕದಂಬಸೇನೆ ರಾಜ್ಯ ಉಪಾಧ್ಯಕ್ಷ
ಎನ್ ಸಿ ಕಾಂಬಳೆ, ಡಾ ದೇವನಹಳ್ಳಿ ದೇವರಾಜ್,
ರಾಜ್ಯ ಕಾರ್ಯಕಾರಿ ವಿನಾಯಕ ಸೊಂಡೂರ, ಬಸವನಬಾಗೇವಾಡಿ ತಾಲ್ಲೂಕು ಅಧ್ಯಕ್ಷ ರಾಜು ಪಿಂಜಾರ, ನಾಯಕರಾದ ಸಂತೋಷ್ ಭಾಸ್ಕರ್, ಅನೀಲ ಇಕ್ಕಡೆ, ಪರುಶುರಾಮ ಚಲವಾದಿ, ಸೋಮಶೇಖರ್ ಶಹಾಪೂರ, ರೇವಣಸಿದ್ದಪ್ಪ ಬುಲಿ೯, ಅಶೋಕ ಕಾಂಬಳೆ, ಯಶವಂತ ದೊಡ್ಡಮನಿ ಮುಂತಾದ ಕದಂಬ ಸೈನಿಕರು ಉಪಸ್ಥಿತರಿದ್ದರು.
ಕನ್ನಡ ನಾಮಫಲಕಕ್ಕೆ ಸಿಗದ ಪ್ರಾಧಾನ್ಯತೆ
ರಾಜ್ಯದಲ್ಲಿ ವಾಣಿಜ್ಯೋದ್ಯಮಿಗಳು, ಅಂಗಡಿ, ಮುಂಗಟ್ಟುಗಳು , ಕಾಖಾ೯ನೆ ಗಳು, ಸಗಟು ವ್ಯಾಪಾರಿಗಳು ಶೇಕಡಾ ೬೦ ರಷ್ಟು ಕನ್ನಡ ನಾಮಫಲಕಗಳು ಇರಬೇಕು ಎಂದು ರಾಜ್ಯ ಸರ್ಕಾರ ಕಾಯ್ದೆ ತಂದಿದ್ದರೂ ಇಂಗ್ಲಿಷ್ ಮತ್ತು ಪರಭಾಷಾ ನಾಮಫಲಕಗಳು ರಾರಾಜಿಸುತ್ತಿವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರ , ಮಹಾನಗರ ಪಾಲಿಕೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಅಧಿಕಾರಿಗಳು ಕಟ್ಟು ನಿಟ್ಟಿನ ಕಾನೂನು ಕ್ರಮ ಜರುಗಿಸದೇ ಇರುವುದು ಸರ್ಕಾರದ ವೈಫಲ್ಯ ಎಂದು ಬೇಕ್ರಿ ರಮೇಶ ದೂರಿದರು.

