ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಪ್ರತಿಭಾವಂತ ಯುವತಿಯೊಬ್ಬಳು ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಹಿರಿಯ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಲು ಆಯ್ಕೆಯಾಗಿ ಗ್ರಾಮೀಣ ಪ್ರತಿಭೆಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ.
ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ಗ್ರಾಮದ ಪ್ರೀತಿ ಸುಭಾಸ್ ಆನೆಗುಂದಿ ಈ ಸಾಧನೆ ಮೆರೆದ ಯುವತಿಯಾಗಿದ್ದಾರೆ. ಉತ್ತಮ ಸೇವೆಯಿಂದಲೇ ಗುರುತಿಸಿಕೊಂಡ ಪ್ರೀತಿ, ಬೆಂಗಳೂರಿನಿಂದ ಗುರುವಾರವೇ ಜರ್ಮನಿಗೆ ತೆರಳುತ್ತಿದ್ದು, ಕೆಲವೇ ದಿನಗಳಲ್ಲಿ ಅಲ್ಲಿನ ನಾರ್ವೆ ರಾಜ್ಯದ ಹಾಕ್ಸ್ಸ್ಟರ್‌ನ ಅಸ್ಕಲೆಪಿಯೋಸ್ ಎಂಬ ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಗ್ರಾಮೀಣ ಪ್ರತಿಭೆಯಾದ ಪ್ರೀತಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಕಂಡಿದ್ದರು. ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ತಂದೆ ಸುಭಾಸ್ ಹಾಗೂ ಕುಟುಂಬದವರು ಪ್ರೀತಿ ಅವರ ಅಧ್ಯಯನಕ್ಕೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು.
ಸದ್ಯ ವಿಜಯಪುರ ಜಿಲ್ಲೆಯಿಂದ ಆಯ್ಕೆಯಾದ ಇಬ್ಬರ ಪೈಕಿ ಪ್ರೀತಿ ಕೂಡ ಒಬ್ಬರಾಗಿದ್ದಾರೆ ಎಂಬುದು ಮಣೂರು ಗ್ರಾಮಸ್ಥರಿಗೆ ಅಭಿಮಾನದ ಸಂಗತಿಯಾಗಿದೆ. ಭಾಷೆ ಮತ್ತಿತರ ಸಮಸ್ಯೆಗಳಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹಿಂಜರಿಯುವ ಗ್ರಾಮೀಣ ಯುವ ಜನತೆಗೆ ವಿದೇಶದಲ್ಲಿ ಸೇವೆ ಸಲ್ಲಿಸಲು ಹೊರಟಿರುವ ಪ್ರೀತಿ ಆನೆಗುಂದಿ ಮಾದರಿಯಾಗಿದ್ದಾರೆ. ಇವರಿಗೆ ಆನೆಗುಂದಿ ಕುಟುಂಬದವರು ಹಾಗೂ ಗ್ರಾಮಸ್ಥರು ಶುಭ ಕೋರಿದ್ದಾರೆ.

