ಪ್ರೌಢಶಾಲೆ ನಿರ್ಮಾಣಕ್ಕೆ ನಿವೇಶನ ಖರೀದಿಗೆ ರೂ.೧೦ ಲಕ್ಷದ ಚೆಕ್ ವಿತರಿಸಿದ ಶಾಸಕ ಅಶೋಕ ಮನಗೂಳಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮನಗೂಳಿ ಮನೆತನ ಶಿಕ್ಷಣ ಕ್ಷೇತ್ರಕ್ಕೆ ಅಗಾದವಾದ ಕೊಡುಗೆ ನೀಡಿದೆ. ಈ ಹಿಂದೆ ಬಮ್ಮನಳ್ಳಿ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣವಾಗಲು ಜಾಗೆಯ ಖರೀದಿಗೆ ೫ಲಕ್ಷ ನೀಡುವುದಾಗಿ ವಾಗ್ದಾನ ಮಾಡಿದ್ದೆ ಕೊಟ್ಟ ಮಾತಿನಂತೆ ಜಾಗೆಯ ಖರೀದಿಗೆ ರೂ.೧೦ಲಕ್ಷದ ಚೆಕ್ಕನ್ನು ಗ್ರಾಮಸ್ಥರ ಪರವಾಗಿ ಶ್ರೀಮಠದ ನರಸಿಂಹ ಮಹಾರಾಜರಿಗೆ ನಿಡುತ್ತಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ಮತಕ್ಷೇತ್ರದ ಬಮ್ಮನಳ್ಳಿ ಗ್ರಾಮದ ಸದ್ಗುರು ಭೀಮಾಶಂಕರ ಮಹಾರಾಜರ ೭೧ನೇ ಜಾತ್ರಾ ಮಹೋತ್ಸವದ ಪುರಾಣ ಮಹಾಮಂಗಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಗೂಳಿ ಮನೆತನ ಕೇವಲ ಭರವಸೆ ನೀಡಿ ಹೊಗುವ ಮನೆತನವಲ್ಲ. ದಿ.ಎಂ.ಸಿ.ಮನಗೂಳಿ ಅವರು ೨ಬಾರಿ ಶಾಸಕರಾಗಿ ಸಚಿವರಾಗಿದ್ದವರು. ಅವರು ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸದಾ ದುಡಿದವರು. ಅವರ ಹಾದಿಯಲ್ಲಿಯೇ ನಾನು ದುಡಿಯುತ್ತಿದ್ದೇನೆ. ಈ ಹಿಂದೆ ಬಮ್ಮನಳ್ಳಿ ಗ್ರಾಮದಲ್ಲಿ ಪ್ರೌಢಶಾಲೆಯನ್ನು ನಿರ್ಮಾಣ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ, ಆದರೆ ಇಲ್ಲಿ ಜಾಗೆಯ ಕೊರತೆಯಿತ್ತು. ಅದನ್ನು ಮನಗಂಡು ರೂ.೫ಲಕ್ಷ ಮನಗೂಳಿ ಪ್ರತಿಷ್ಠಾನ ಮತ್ತು ಸಚಿವರಿಂದ ರೂ.೫ಲಕ್ಷ ನೀಡಲಾಗುತ್ತಿದೆ. ಜಾಗೆಯ ಖರೀದಿಗಾಗಿ ಪ್ರೋತ್ಸಾಹಿಸಿದ ಸಚಿವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದ ನರಸಿಂಹ ಮಹಾರಾಜರು, ಪ್ರತಿಷ್ಠಾನದ ಸದಸ್ಯ ಚನ್ನು ಪಟ್ಟಣಶೆಟ್ಟಿ, ಬಸವರಾಜಗೌಡ ಪಾಟೀಲ, ಬಿ.ಎಚ್.ಬಿರಾದಾರ, ಸಂಗನಗೌಡ ಬಿರಾದಾರ ಸೇರಿದಂತೆ ಗ್ರಾಮಸ್ಥರು ಇದ್ದರು.
“ಸರ್ಕಾರ ಪ್ರೌಢಶಾಲೆಯನ್ನು ಮಂಜೂರು ಮಾಡಿದೆ. ಕೆಲವೇ ದಿನಗಳಲ್ಲಿ ಶಾಲೆಗೆ ಜಾಗೆಯನ್ನು ಖರೀದಿ ಮಾಡಿ ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

