ಅಧಿಕಾರಿಗಳಿಗೆ ಜಿ.ಪಂ.ಸಿಇಓ ರಾಹುಲ ಶಿಂಧೆ ಕಿವಿಮಾತು
ವಿಜಯಪುರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಟ್ಟುನಿಟ್ಟಾಗಿ ನಿಯಮ ಪಾಲಿಸುವುದರೊಂದಿಗೆ ಮಾನವೀಯ ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿಷಯಗಳ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಈಗಾಗಲೇ ಜಿಲ್ಲೆಯಲ್ಲಿ ಮನರೇಗಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ೧೨ ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಅಧಿಕಾರಿಗಳು ಗ್ರಾಮೀಣ ಕೂಲಿಕಾರರಿಗೆ ಯೋಜನೆಯ ಲಾಭ ದೊರಕಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿ ನಿತ್ಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ ೩೦೦ ಜನ ಕೂಲಿಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ದೊರಕುವಂತೆ ನೋಡಿಕೊಳ್ಳಬೇಕು. ಕೆಲಸದ ಬೇಡಿಕೆ ಸಲ್ಲಿಸುವ ಪ್ರತಿ ವ್ಯಕ್ತಿಗೂ ಕೂಲಿ ಕೆಲಸ ಸಿಗಬೇಕು ಆ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯ ಬಹುತೇಕ ರೈತರು ಪ್ರಸ್ತುತ ಅವಧಿಯಲ್ಲಿ ತುಂಬಾ ಕಷ್ಟದಲ್ಲಿದ್ದಾರೆ. ಪ್ರತಿಯೊಬ್ಬರು ಗ್ರಾಮೀಣ ಭಾಗದಿಂದ ಮತ್ತು ರೈತ್ತಾಪಿ ಕುಟುಂಬದಿಂದ ಬಂದವರಾಗಿದ್ದು, ರೈತರ ಕಷ್ಟಗಳನ್ನು ಅತೀ ಹತ್ತಿರದಿಂದ ನೋಡಿರುತ್ತೇವೆ. ಅಂತಹ ಕಷ್ಟಗಳ ನಿವಾರಣೆಯ ದೃಷ್ಠಿಯಿಂದ ಎಲ್ಲರೂ ಕರ್ತವ್ಯ ನಿರ್ವಹಿಸಿ, ರೈತರಿಗೆ ನರೇಗಾ ಯೋಜನೆಯಡಿ ಸಿಗುವ ವೈಯಕ್ತಿಕ ಸೌಲಭ್ಯಗಳಾದ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಬೊರವೆಲ್ ಮರು ಪೂರ್ಣ ಘಟಕ (ರಿಚಾರ್ಜ್ ಫಿಟ್), ತೋಟಗಾರಿಕೆ ಬೆಳೆಗಳಿಗೆ ಸಹಾಯ ಧನ ಸೇರಿ ಇತರೆ ಇಲಾಖೆಗಳಡಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ, ಅವರಿಗೆ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದರು.
ಸರಕಾರದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಮಂಜೂರಾಗಿರುವ ಎಲ್ಲಾ ಮನೆಗಳನ್ನು ನಿಯಮಾನುಸಾರ ಜಿಪಿಎಸ್ ಮಾಡಿಸಿ ಮನೆ ನಿರ್ಮಾಣ ಕಾರ್ಯ ಆರಂಭಿಸುವಂತೆ ಫಲಾನುಭವಿಗಳಿಗೆ ಪ್ರೇರಣೆ ನೀಡಬೇಕು. ಈಗಾಗಲೇ ಪ್ರಗತಿಯಲ್ಲಿರುವ ಮನೆಗಳನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಮುಖ್ಯ ಲೆಕ್ಕಾಧಿಕಾರಿಗಳಾದ ರಾಮಣ್ಣ ಅಥಣಿ, ಯೋಜನಾ ನಿರ್ದೇಶಕರಾದ ಸಿ.ಬಿ.ದೇವರಮನಿ, ಸೇರಿದಂತೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.