ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ಪಠ್ಯಕ್ರಮ, ಪಠ್ಯ ಯೋಜನೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಕ್ರೀಯವಾಗಿ ಪಾಲ್ಗೊಂಡು ವೈವಿಧ್ಯಮ ಕೌಶಲ್ಯಗಳನ್ನು ಒಡಮೂಡಿಸಲು ಪೂರಕವಾಗಿದೆ. ಪದವಿ ವಿದ್ಯಾರ್ಥಿಗಳು ವಿಷಯ ಜ್ಞಾನವನ್ನು ಪಡೆಯಲಷ್ಟೇ ಸಿಮೀತವಾಗಬಾರದೆಂಬ ಮಹೋನ್ನತವಾದ ಉದ್ಧೇಶದಿಂದ ಅವರು ಶಿಕ್ಷಣದ ವಿವಿಧ ಮಜಲುಗಳಲ್ಲಾಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳುವಂತೆ ವಿದ್ಯಾರ್ಥಿಗಳು ರೂಪಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತç ವಿಭಾಗದಿಂದ ಬಿ.ಕಾಂ ವಿದ್ಯಾರ್ಥಿಗಳಿಗಾಗಿ ದಿನಾಂಕ: ೨೭-೧೧-೨೦೨೫ ರಂದು ಆಯೋಜಿಸಿದ ‘ಚಟುವಟಿಕೆ ಆಧಾರಿತ ಕಲಿಕೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ಬೋಧಿಸಿದ ವಿಷಯದ ಅರ್ಥಗ್ರಹಿಕೆ ಮತ್ತು ಪರಿಣಾಮಕಾರಿ ಬೋಧನೆ-ಕಲಿಕೆಯಲ್ಲಿ ಸಾಮರಸ್ಯತೆಯನ್ನು ಸಾಧಿಸಲು ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪ್ರಾಯೋಗಿಕ ಜ್ಞಾನ, ಪ್ರಾಜೆಕ್ಟ್ ತಯಾರಿಕೆ, ಮಾದರಿ ತಯಾರಿಕೆ, ಯೋಜನೆ ರೂಪಿಸುವುದು, ವ್ಯವಹಾರಕ್ಕೆ ಅಗತ್ಯವಾದ ಬಂಡವಾಳದ ಬಜೆಟ್ ಸಿದ್ದತೆಯಂತಹ ಮುಂತಾದ ಕೌಶಲ್ಯಗಳನ್ನು ಒಡಮೂಡಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ಯಾವುದಾದರೊಂದು ವಿಷಯವನ್ನು ಹಂಚಿಕೆ ಮಾಡಿ, ತಮ್ಮ ಕ್ರಿಯಾಶೀಲತೆ, ಸೃಜನಾತ್ಮಕತೆ, ಕೌಶಲ್ಯ, ವಿವೇಚನಾಶಕ್ತಿ, ವಿಶ್ಲೇಷಣಾ ಮನೋಭಾವನೆ ಮತ್ತು ತಾರ್ಕಿಕ ಶಕ್ತಿ-ಸಾಮರ್ಥ್ಯದಿಂದ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ದೆಸೆಯಲ್ಲಿಯೇ ಕೌಶಲ್ಯಗಳನ್ನು ಬೆಳೆಸಬೇಕು. ಅಂದಾಗ ಮಾತ್ರ ಅವರು ಕೈಗೊಂಡ ಯಾವುದೇ ಭಾವಿ ವ್ಯವಹಾರ, ಉದ್ದಿಮೆ, ಮಾರ್ಕೆಟಿಂಗ್ ಅಥವಾ ಸ್ವಯಂ ಉದ್ಯೋಗವನ್ನು ಯಶಸ್ವಿಯಾಗಿ ಮಾಡಲು ಸಹಕಾರಿಯಾಗಲಿದೆ ಎಂದರು.
ಈ ಪ್ರಾಜೆಕ್ಟ ತಯಾರಿಕೆ ಮತ್ತು ಪ್ರಸ್ತುತಿ ಕಾರ್ಯಾಗಾರದಲ್ಲಿ ಬಿ.ಕಾಂ-೩ ನೇಯ ಸೆಮೆಸ್ಟರ್ ನ ವಿದ್ಯಾರ್ಥಿಗಳಾದ ಅಂಬಿಕಾ ಮುಳಸಾವಳಗಿ, ಲಕ್ಷ್ಮಿ ಕೋಳಿ, ರಾಧಿಕಾ ನಾವಿ, ಚೇತನಾ ಬಿರಾದಾರ, ಕೀರ್ತಿ ನಾಟಿಕಾರ, ಜ್ಯೋತಿ ಚವ್ಹಾಣ, ಗೌರಮ್ಮ ಲೋಗಾವಿ, ಇವರು ತಮ್ಮ ಅಭಿರುಚಿ-ಆಸಕ್ತಿಗನುಗುಣವಾಗಿ ಪ್ರೊಜೆಕ್ಟಗಳನ್ನು ತಯಾರಿಸಿ ಅದರ ಬಗ್ಗೆ ವಿಷಯ ಪ್ರಸ್ತುತಪಡಿಸಿದರು.
