ವಿಜಯಪುರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬೆಳೆ ಖರೀದಿ ಕೇಂದ್ರ ಆರಂಭಿಸಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ಶಾಸಕರಿಗಾಗಿ ಖರೀದಿ ಕೇಂದ್ರ ಆರಂಭಿಸಿದೆ, ಡಿ.ಕೆ. ಶಿವಕುಮಾರ ಪರ ಬರುವ ಶಾಸಕರ ಖರೀದಿ ಕೇಂದ್ರ, ಸಿದ್ಧರಾಮಯ್ಯ ಅವರ ಪರವಾಗಿ ಬರುವ ಶಾಸಕರ ಖರೀದಿ ಕೇಂದ್ರ ಆರಂಭಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ೨,೪೧೬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ವಿಷಯವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿಲ್ಲ, ಹೆಸರು, ಉದ್ದು, ಸೋಯಾಬೀನ್ ಮೊದಲಾದವುಗಳ ಖರೀದಿಗೆ ಖರೀದಿ ಕೇಂದ್ರ ಸಹ ಆರಂಭಿಸದಷ್ಟು ರಾಜ್ಯ ಸರ್ಕಾರ ಬೇಜವಾಬ್ದಾರಿಯಲ್ಲಿ ತೊಡಗಿದೆ, ರೈತರು ಬೀದಿಗಿಳಿದು ಖರೀದಿ ಕೇಂದ್ರ ಆರಂಭಿಸುವ ಕೆಲಸ ಮಾಡಿಲ್ಲ, ಆದರೆ ಶಾಸಕರ ಖರೀದಿ ಕೇಂದ್ರವನ್ನು ಈ ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
ದಲಿತ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಅನುದಾನ ದುರ್ಬಳಕೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ, ಈ ಬಗ್ಗೆ ಧ್ವನಿ ಎತ್ತಬೇಕಾದ ದಲಿತ ಶಾಸಕರು ಮೌನ ವಹಿಸಿದ್ದಾರೆ, ಈಗ ಊಟಕ್ಕೆ ಸೇರುತ್ತಿರುವ ಅವರು ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯದ ವೇಳೆ ಧ್ವನಿ ಎತ್ತಲು ಸಮಾವೇಶಗೊಳ್ಳಬೇಕಿತ್ತು ಎಂದು ಕಡಾಡಿ ಕಿವಿಮಾತು ಹೇಳಿದರು.
ಬಿಡಿಗಾಸು ಬಿಡುಗಡೆ ಮಾಡದ ಸರ್ಕಾರ
ಮೂರು ಹಂತದಲ್ಲಿ ಹೋರಾಟಕ್ಕೆ ಸಿದ್ಧತೆ
ಸ್ಪಷ್ಟ ಬಹುಮತ ಇದ್ದರೂ ಅಸ್ಥಿರವಾದ ಸರ್ಕಾರವನ್ನು ನೋಡುವ ಅವಕಾಶ ಜನತೆಗೆ ದೊರಕಿದೆ, ಆಡಳಿತ ಯಂತ್ರಕ್ಕೆ ಲಗಾಮು ಇಲ್ಲದಂತಾಗಿದೆ, ಒಬ್ಬ ಸಚಿವರೂ ಗಂಭೀರವಾಗಿ ಪ್ರಗತಿ ಪರಿಶೀಲನಾ ಸಭೆ ನಡೆಸಿಲ್ಲ, ಇದರಿಂಧಾಗಿ ಅಧಿಕಾರಿಗಳಿಗೆ ಹೇಳುವವರು, ಕೇಳುವವರೇ ಇಲ್ಲದಂತಾಗಿದೆ, ಆಡಳಿತ ಪಕ್ಷದ ಶಾಸಕರೇ ಅಸಹಾಯಕತೆ ವ್ಯಕ್ತಪಡಿಸಿ ಕ್ಷೇತ್ರದ ಜನತೆಗೆ ಮುಖ ತೋರಿಸದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ, ಇದನ್ನು ಅವರ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ ಎಂದರು.
ಇವರನ್ನು ಇಳಿಸಿ, ಇವರನ್ನು ಮುಂದುವರೆಸಿ ಎಂದು ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಠಿಕಾಣಿ ಹೂಡಿದೆ, ಜನರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ ಎಂದರು.
ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಖರೀದಿ ಕೇಂದ್ರ ಆರಂಭಿಸಿಲ್ಲ, ಅತಿವೃಷ್ಟಿಯಿಂದಾಗಿ ೩ ಲಕ್ಷ ಹೆಕ್ಟೇರ್‌ಗೂ ಅಧಿಕ ಬೆಳೆ ವಿಜಯಪುರ ಜಿಲ್ಲೆಯಲ್ಲಿಯೇ ನಷ್ಟವಾಗಿದೆ, ಆದರೆ ಇಲ್ಲಿಯವರೆಗೂ ರೈತರಿಗೆ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಕುಂಭಕರ್ಣ ನಿದ್ರೆಯಲ್ಲಿರುವ ಈ ಸರ್ಕಾರವನ್ನು ಎಚ್ಚರಿಸಲು ಮೂರು ಹಂತದ ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ, ಎರಡನೇಯ ಹಂತವಾಗಿ ಡಿಸೆಂಬರ್ ಮಾಹೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನೇತೃತ್ವದಲ್ಲಿ ಹಾಗೂ ಮೂರನೇಯ ಹಂತದಲ್ಲಿ ಚಳಿಗಾಲ ಅಧಿವೇಶನ ಸಮಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಲು ನಿರ್ಣಯ ಸ್ವೀಕರಿಸಲಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ವಿಜಯಕುಮಾರ ಕುಡಿಗನೂರ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಾಲರಾಜ ರೆಡ್ಡಿ, ವಿಜಯ ಜೋಶಿ ಮೊದಲಾದವರು ಪಾಲ್ಗೊಂಡಿದ್ದರು.

