ವಿಜಯಪುರದಲ್ಲಿ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ದ್ರಾಕ್ಷಿ ಬೆಳೆಗಾರರು ಮೊದಲೇ ಸಾಕಷ್ಟು ತೊಂದರೆಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ, ತಮಗೆ ಕಷ್ಟಕಾಲಕ್ಕೆ ಅನುಕೂಲವಾಗುವ ವಿಮಾ ಹಣ ಸಹ ಅವರಿಗೆ ಪಾವತಿಯಾಗುತ್ತಿಲ್ಲ, ನಕಲಿ ಕ್ಷೇತ್ರ ನೆಪವೊಡ್ಡಿ ಇನ್ಸೂರೆನ್ಸ್ ಹಣ ನೀಡದೇ ಸತಾಯಿಸುತ್ತಿವೆ, ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ, ಇಲ್ಲವಾದರೆ ಬೃಹತ್ ಹೋರಾಟ ಅನಿವಾರ್ಯ ಎಂದು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಡಾ.ಕೆ.ಎಚ್. ಮುಂಬಾರೆಡ್ಡಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ ಹೀಗೆ ಅನೇಕ ಸಮಸ್ಯೆಗಳು ದ್ರಾಕ್ಷಿ ಬೆಳೆಗಾರರನ್ನು ಕಾಡುತ್ತಲೇ ಇವೆ, ಈಗ ಇನ್ಯೂರೆನ್ಸ್ ಕಂಪನಿಗಳು ಸಹ ರೈತರನ್ನು ಕಾಡುವಂತಾಗಿದೆ, ವಿನಾಕಾರಣ ನಕಲಿ ಕ್ಷೇತ್ರ ಎನ್ನುವ ಹೆಸರಿನಲ್ಲಿ ವಿಮಾ ಹಣ ಪಾವತಿಗೆ ಕಂಪನಿಗಳು ಹಿಂದೇಟು ಹಾಕುತ್ತಿವೆ, ಈ ರೀತಿಯ ಸಮಸ್ಯೆ ಹೇಳಿಕೊಂಡು ಕಾಲಹರಣ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ಎಐಸಿ (ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ) ರೈತರಿಗೆ ವಿಮಾ ಹಣ ಒದಗಿಸಬೇಕಿದೆ, ಜಿಲ್ಲೆಯಲ್ಲಿ ೧೬ ಸಾವಿರ ರೈತರು ಇದ್ದು, ಪತ್ರಿ ಹೆಕ್ಟೇರ್ ಗೆ ಸುಮಾರು ೧೫ ಸಾವಿರ ಹಣ ಭರಣಾ ಸಹ ಮಾಡಿದ್ದಾರೆ, ನಿಖರವಾದ ಹಣದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಸಮೀಕ್ಷೆ ಮುಗಿದ ಪ್ರಕಾರವಾದರೂ ಪರಿಹಾರ ಬಿಡುಗಡೆ ಮಾಡಬೇಕು. ಕೆಲವೊಬ್ಬರು ಮಾಡಿರುವ ತಪ್ಪಿನಿಂದ ಎಲ್ಲ ರೈತರ ಪರಿಹಾರ ತಡೆ ಹಿಡಿದಿರುವುದು ಸರಿಯಲ್ಲ. ಬೆಳಗಾವಿಯಲ್ಲಿ ಈಗಾಗಲೇ ವಿಮೆ ಹಣ ಪರಿಹಾರ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ವಿಜಯಪುರ ರೈತರಿಗೂ ಪರಿಹಾರ ಬಿಡುಗಡೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರು ಬೆಳೆ ವಿಮೆಗೆ ಪ್ರೀಮಿಯಂ ಹಣ ತುಂಬಿದ ಪ್ರಕಾರ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು, ೨೦೨೪-೨೫ನೇ ಸಾಲಿನಲ್ಲಿ ದ್ರಾಕ್ಷಿ ಬೆಳೆಗೆ ರೈತರು ವಿಮೆಯ ಹಣ ಪ್ರೀಮಿಯಂ ತುಂಬಿದ್ದಾರೆ. ಆದರೆ, ಬೆಳೆ ಸಮೀಕ್ಷೆ ಮಾಡಿದಾಗ ಪ್ರೀಮಿಯಂ ತುಂಬಿರುವುದಕ್ಕಿಂತಲೂ ಪ್ರದೇಶ ಕಡಿಮೆ ಇರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅಧಿಕಾರಿಗಳ ಸಮೀಕ್ಷೆ ಅವಧಿಯೇ ಸರಿಯಾಗಿಲ್ಲ. ಸಮೀಕ್ಷೆ ವೇಳೆ ಜಮೀನಿನಲ್ಲಿ ದ್ರಾಕ್ಷಿ ಬೆಳೆ ಇರಲಿಲ್ಲ. ಹೀಗಾಗಿ ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆಗಳು ಇವೆ, ಕೂಡಲೇ ಇವುಗಳನ್ನು ಪರಿಹರಿಸಿ ದ್ರಾಕ್ಷಿ ಬೆಳೆಗಾರರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಆರ್. ಉಟಗಿ, ವಾಮನ ಮಹಿಷಿ, ಎಂ.ಆರ್. ತುಂಗಳ, ಶ್ರೀಶೈಲಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಸುರೇಶಗೌಡ ಬಿರಾದಾರ, ಮಹಾವೀರ ಕುಸನಾಳ, ಅಶೋಕ ಬಾಲಗಾವಿ, ವಿಶ್ವನಾಥ ಚನಾಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

