ವಿಶಿಷ್ಟವಾಗಿ ಕಬ್ಬು ಬೆಳೆದ ಮಾದರಿ ರೈತನಿಗೆ ಸಚಿವರಿಂದ ಸನ್ಮಾನ | 120 ಟನ್ ಕಬ್ಬು ಬೆಳೆದ ರೈತನ ತಾಂತ್ರಿಕ ಅಧ್ಯಯನಕ್ಕೆ ಬಂದ ಕಬ್ಬು ಸಂಸ್ಥೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಮ್ಮ ಕ್ಷೇತ್ರದಲ್ಲಿ ಹನಿ ನೀರಾವರಿ ಪದ್ಧತಿಯಲ್ಲಿ ಸಂಶೋಧನಾ ಹಂತದಲ್ಲಿರುವ ಕಬ್ಬು ಬೆಳೆದು, ಅಧಿಕ ಇಳುವರಿಯ ಸಾಧನೆ ಮಾಡಿರುವ ಮಾಜಿ ಸೈನಿಕ-ರೈತನನ್ನು ಸ್ವಯಂ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವರೇ ಸನ್ಮಾನಿಸಿ, ಗೌರವಿಸಿ, ಪ್ರೋತ್ಸಾಹ ನೀಡಿದ್ದಾರೆ.
ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಮಾಜಿ ಸೈನಿಕ ನಾರಾಯಣ ಸಾಳುಂಕೆ ಎಂಬವರು ಕೇವಲ ಮೂರು ವರ್ಷದಲ್ಲಿ ಕಬ್ಬು ಬೆಳೆಯಲ್ಲಿ ಅನುಕರಣೀಯ ಸಾಧನೆ ಮಾಡಿದ್ದಾರೆ. ಇದನ್ನರಿತ ಕ್ಷೇತ್ರದ ಶಾಸಕರೂ ಆಗಿರುವ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಸಾಧನ ರೈತನನ್ನು ಸನ್ಮಾನಿಸುವ ಮೂಲಕ ರೈತಸೇನಾನಿಯ ಸಾಧನೆಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ತಮ್ಮದೇ ಕ್ಷೇತ್ರ ವ್ಯಾಪ್ತಿಯ ಮಾಜಿ ಸೈನಿಕ ನಾರಾಯಣ ಸಾಳುಂಕೆ ಅವರು ಸಾಮಾನ್ಯ ಕಬ್ಬು ಬೆಳೆಗಾರರಿಗಿಂತ ಕಡಿಮೆ ವೆಚ್ಚದಲ್ಲಿ ದುಪ್ಪಟ್ಟು ಇಳುವರಿ ಕಬ್ಬು ಬೆಳೆದ ವಿಷಯ ಸ್ವಯಂ ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಹಿತ ಜವಳಿ ಖಾತೆ ಹೊಂದಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ತಲುಪಿತು. ಕೂಡಲೇ ವಿಶಿಷ್ಟ ತಾಂತ್ರಿಕತೆಯಿಂದ ಅಧಿಕ ಇಳುವರಿಯ ಕಬ್ಬು ಬೆಳೆದ ಪ್ರಗತಿಪರ ರೈತ ನಾರಾಯಣ ಅವರನ್ನು ಕರೆಸಿ ಸನ್ಮಾನಿಸಿ, ಬೆನ್ನುತಟ್ಟಿದರು.
ಇಷ್ಟಕ್ಕೆ ಸುಮ್ಮನಾಗದ ಸಚಿವ ಶಿವಾನಂದ ಪಾಟೀಲ ಅವರು ಸಾಧಕ ರೈತನ ತಾಂತ್ರಿಕತೆ ಅರಿಯಲು ಕೃಷಿ ಇಲಾಖೆ ಹಾಗೂ ಎಸ್.ನಿಜಲಿಂಗಪ್ಪ ಕಬ್ಬು ಸಂಸ್ಥೆಯ ಸಂಶೋದಕರನ್ನು ರೈತನ ಕಬ್ಬಿನ ಗದ್ದೆಗೆ ಕಳಿಸಿ ಅಧ್ಯಯನ ನಡೆಸಲು ಸೂಚಿಸಿದರು.

ಸಚಿವರ ಸೂಚನೆಯಂತೆ ಗೊಳಸಂಗಿ ಗ್ರಾಮಕ್ಕೆ ಭೇಟಿ ನೀಡಿದ ಸಂಶೋಧಕರಾದ ಡಾ.ಆರ್.ಬಿ.ಸುತಗುಂಡಿ ನೇತೃತ್ವದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದ ಹಿರಿಯ ವಿಜ್ಞಾನಿ ಡಾ.ಶಿವಶಂಕರಮೂರ್ತಿ, ಕೃಷಿ ಇಲಾಖೆಯ ಬಸವನಬಾಗೇವಾಡಿ ಕೃಷಿ ಸಹಾಯಕ ನಿರ್ದೇಶಕರಾದ ಎಂ.ಎಚ್.ಯರಝರಿ ಅವರಿದ್ದ ತಜ್ಞರ ತಂಡ ನಾರಾಯಣ ಅವರ ಕಬ್ಬಿನ ಬೆಳೆ ಪರಿಶೀಲಿಸಿ, ಮಾಹಿತಿ ಸಂಗ್ರಹಿದ್ದಾರೆ.
ಸದರಿ ಸಾಧಕ ರೈತ ಅಳವಡಿಸಿಕೊಂಡಿರುವ ವಿಶಿಷ್ಟ ತಾಂತ್ರಿಕತೆ, ನಿರ್ವಹಣೆ ಸೇರಿದಂತೆ ಸಮಗ್ರ ವರದಿ ಸಿದ್ಧಪಡಿಸಿ ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವಾಲಯಕ್ಕೆ ಸಲ್ಲಿಸಲು ಮುಂದಾಗಿದ್ದಾರೆ.
ಸಚಿವ ಶಿವಾನಂದ ಪಾಟೀಲ ಅವರು ರೈತರ ಬಗ್ಗೆ ಹೊಂದಿರುವ ಕಾಳಜಿ, ತನ್ನನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಮಾಜಿ ಸೈನಿಕ ನಾರಾಯಣ ಸಾಳುಂಕೆ ಸಂತಸಗೊಂಡಿದ್ದು, ತಮ್ಮನ್ನು ಗುರುತಿಸಿದ್ದಕ್ಕೆ ಮುಕ್ತವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

