ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ಸಂವಿಧಾನವು ರಾಷ್ಟ್ರಕ್ಕೆ ಅರ್ಪಣೆಗೊಂಡಿರುತ್ತದೆ ಎಂದು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ‍್ಯ, ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ. ಯುವ ಸಮುದಾಯ ಭಾರತದ ಸಂವಿಧಾನ ಪೀಠಿಕೆಯನ್ನು ಓದಿ ಅರ್ಥಮಾಡಿಕೊಳ್ಳಬೇಕು. ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದರು.
ಈ ವೇಳೆ ಆರ್.ಡಿ.ಪಾಟೀಲ ಪಪೂ ಕಾಲೇಜಿನ ಉಪನ್ಯಾಸಕ ಎನ್.ಬಿ.ಪೂಜಾರಿ ಉಪನ್ಯಾಸ ನೀಡಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿ ವರ್ಷ ನ.೨೬ರಂದು ಸಂವಿಧಾನ ದಿನ ಆಚರಿಸಲಾಗುತ್ತದೆ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು, ಎಲ್ಲ ವರ್ಗದವರಿಗೂ ಸಂವಿಧಾನದಲ್ಲಿ ಸಮಾನವಕಾಶ ಕಲ್ಪಿಸಲಾಗಿದೆ. ಸಂವಿಧಾನದ ಕರಡು ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ವಿವಿಧ ದೇಶಗಳ ಸಂವಿಧಾನವನ್ನು ಸುದೀರ್ಘ ಅಧ್ಯಯನ ಮಾಡಿ, ದೇಶಕ್ಕೆ ಸರ್ವಶ್ರೇಷ್ಠವಾದ ಸಂವಿಧಾನ ರಚಿಸಿದ್ದಾರೆ ಎಂದರು.
ಈ ವೇಳೆ ಪುರಸಭೆ ನಾಮ ನಿರ್ದೇಶಿತ ಸದಸ್ಯ ಸಾಯಬಣ್ಣ ಪುರದಾಳ, ದಸಂಸ ಮುಖಂಡ ರಾಕೇಶ ಕಾಂಬಳೆ, ಅಶೋಕ ಅಲ್ಲಾಪುರ ಮಾತನಾಡಿದರು. ಈ ವೇಳೆ ಎಡಿಎಲ್‌ಆರ್ ಮಹಾಂತೇಶ ಅಗಸಬಾಳ, ಅಲ್ಪಸಂಖ್ಯಾತರ ಮುರಾರ್ಜಿ ಶಾಲೆಯ ಮುಖ್ಯಗುರು ಸಿದ್ದಪ್ಪ ಕಾರಿಮುಂಗಿ, ಅಶೋಕ ಅಲ್ಲಾಪುರ, ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ನೌಕರ ಸಂಘದ ತಾಲೂಕಾಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಎ.ಆರ್.ಹೆಗ್ಗನದೊಡ್ಡಿ, ಸಾಯಬಣ್ಣ ಪುರದಾಳ, ಅರವಿಂದ ಡೋಣುರ, ರಾಕೇಶ ಕಾಂಬಳೆ, ರಜತ ತಾಂಬೆ, ಪ್ರಭುಗೌಡ ಬಿರಾದಾರ, ಮಹೇಶ ಮಾದರ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಡಾ.ಅಂಬೇಡ್ಕರ್ ಅವರ ಅನುಯಾಯಿಗಳು, ಅಭಿಮಾನಿಗಳು ಇದ್ದರು.
ಇದೇ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಲಾಯಿತು.
ತಾಪಂ ಇಒ ರಾಮು ಅಗ್ನಿ ಪ್ರಾಸ್ತಾವಿಕ ಮಾತನಾಡಿದರು.
ಸಂವಿಧಾನ ಪೀಠಿಕೆಯನ್ನು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಬೋಧಿಸಿದರು. ಡಾ.ಪ್ರಕಾಶ ರಾಗರಂಜಿನಿ ಪ್ರಾರ್ಥಿಸಿದರು. ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳಿಂದ ನಾಡಗೀತೆ ಮೊಳಗಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭವಾನಿ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಎಂ.ಆರ್.ಡೋಣಿ ನಿರೂಪಿಸಿದರು. ಬಿಓ ಮಹಾಂತೇಶ ಯಡ್ರಾಮಿ ವಂದಿಸಿದರು.

