ಬಂಜಾರಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಸೈಕ್ಲಿಂಗ್ನಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸೈಕಲ್ ತುಳಿಯುವುದರಿಂದ ದೇಹದ ಹಲವಾರು ಭಾಗಗಳಿಗೆ ವ್ಯಾಯಾಮ ಸಿಗುವುದು ಮತ್ತು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸೈಕ್ಲಿಂಗ್ ನಡೆಸಿದರೆ ಅದರಿಂದ ಒತ್ತಡ, ಅತಿಯಾದ ತೂಕ, ಅಧಿಕ ಕೊಲೆಸ್ಟ್ರಾಲ್ ಅಥವಾ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸಬಹುದು ಎಂದು ಶಾಲಾ ಶಿಕ್ಷಣ ಪದವಿ ಪೂರ್ವ ಉಪನಿರ್ದೇಶಕರು ಡಾ.ಚಂದ್ರಶೇಖರ ಹೊಸಮನಿಯವರು ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಶುಭ ಹಾರೈಯಿಸುತ್ತ ಮಾತನಾಡಿದ ಅವರು, ಸೈಕಲ್ ತುಳಿಯುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಮುದೋಳ ನಗರದಲ್ಲಿ ನಡೆದ ರಾಜ್ಯ ಮಟ್ಟದ ಸೈಕ್ಲಿಂಗ್ ಬಾಲಕಿಯರ ವಿಭಾಗದ ೧೫ ಕಿ.ಮೀ ಸ್ಪರ್ಧೆಯಲ್ಲಿ ಜ್ಯೋತಿ ರಾಠೋಡ ಪ್ರಥಮ ಸ್ಥಾನ ಹಾಗೂ ಪಲ್ಲವಿ ಹಂಚನಾಳ ೩ ಕಿ.ಮೀ ಸೈಕ್ಲಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಯುವ ಮೂಲಕ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಬೆಂಗಳೂರು ಜಂಟಿ ನಿರ್ದೇಶಕರಾ(ಪಿಯು ಪರೀಕ್ಷಾ ವಿಭಾಗ)ದ ಸಿ.ಎಂ.ಮಹಾಲಿಂಗಯ್ಯ, ಬಂಜಾರಾ ಸಂಸ್ಥೆಯ ಅಧ್ಯಕ್ಷರಾದ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷರಾದ ಕೆ.ಜಿ.ರಾಠೋಡ, ಕಾರ್ಯದರ್ಶಿಗಳಾದ ಆರ್.ಡಿ.ಚವ್ಹಾಣ್, ಪ್ರಾಚಾರ್ಯರಾದ ಎಸ್.ಬಿ.ಪವಾರ, ಎಸ್.ಎಸ್.ತೆನಳ್ಳಿಯವರು ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷವ್ಯಕ್ತಪಡಿಸಿದ್ದಾರೆ.

