ದೇಶದ ನಾನಾ ಭಾಗಗಳಿಂದ ಸಹಸ್ರಾರು ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿ | ಟಿಇಟಿ ರದ್ದತಿಗೆ ಮೊಳಗಿದ ಒಕ್ಕೊರಲಿನ ಪ್ರತಿಧ್ವನಿ
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ (ನ,೨೪) ನವದೆಹಲಿಯ ಜಂತರ್ ಮಂತರ್‌ನಲ್ಲಿ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಶನ್ ಆಶ್ರಯದಲ್ಲಿ ಅಸಂಖ್ಯಾತ ಶಿಕ್ಷಕರು ಬೃಹತ್ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ವತಿಯಿಂದ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾನಾ ಪ್ರದೇಶಗಳಿಂದ ಸಹಸ್ರಾರು ಶಿಕ್ಷಕರು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕದ ೨ ಲಕ್ಷ, ದೇಶದ ೩೦ ಲಕ್ಷ ಶಿಕ್ಷಕರು ಶಿಕ್ಷಕ ವೃತ್ತಿಯಲ್ಲಿ ಮುಂದುವರೆಯಬೇಕಾದರೇ ೨ ವರ್ಷದಲ್ಲಿ ಕಡ್ಡಾಯವಾಗಿ ಟಿಇಟಿ ಪಾಸಾಗಬೇಕಿದೆ. ಶಿಕ್ಷಕ ಸಮೂಹಕ್ಕೆ ಮಾರಕವಾಗಿರುವ ಈ ಟಿಇಟಿ ಕಡ್ಡಾಯ ನೀತಿಯನ್ನು ಕೂಡಲೇ ಕೈಬಿಡಬೇಕೆಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು.
ದೇಶದ ೩೦ ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಯ ಅಭದ್ರತೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.
ಈ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್ ನವದೆಹಲಿಯ ರಾಷ್ಟ್ರಾಧ್ಯಕ್ಷರಾದ ಬಸವರಾಜ ಗುರಿಕಾರ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಮಾತನಾಡಿ, ಸುಪ್ರೀಂ ಕೋರ್ಟ್ ನ ಆದೇಶದ ಪ್ರಕಾರ ರಾಜ್ಯದಲ್ಲಿ ಟಿಇಟಿ ಯನ್ನು ಕಡ್ಡಾಯಗೊಳಿಸಿರುವುದರಿಂದ ೧ ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ಅನ್ಯಾಯವಾಗುತ್ತಿರುವುದರ ಬಗ್ಗೆ ತೀವ್ರತೆ ಧ್ವನಿ ಎತ್ತಿ ಕಿಡಿಕಾರಿದರಲ್ಲದೆ, ಇಡೀ ಹೋರಾಟದಲ್ಲಿ ಅತ್ಯಂತ ಉಗ್ರವಾಗಿ ಟಿಇಟಿ ಕಡ್ಡಾಯ ಕರ್ಮ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ತಕ್ಷಣ ಲೋಕಸಭೆ, ರಾಜ್ಯಸಭೆ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಸೂಕ್ತ ಕಾನೂನು ತಿದ್ದುಪಡಿಯನ್ನು ತಂದು ರಾಷ್ಟ್ರದ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇತ್ತ ಗಮನ ಹರಿಸಿ ಶಿಕ್ಷಕರ ಸಮಸ್ಯೆ ಮನಗಂಡು ಕೂಡಲೇ ಟಿಇಟಿ ಕಡ್ಡಾಯ ನೀತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಲೋಕಸಭೆಯಲ್ಲಿ ಇದಕ್ಕಾಗಿ ವಿಶೇಷ ಕಾಯ್ದೆ ತಂದು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೇವಾ ರಕ್ಷಣೆ ನೀಡಿ, ಸುಪ್ರೀಂಕೋರ್ಟ್ ನ ಈ ಆದೇಶ ಪೂರ್ವಾನ್ವಯಗೊಳಿಸದೇ ಮುಂದಿನ ನೇಮಕಾತಿಗಳಲ್ಲಿ ಟಿಇಟಿ ಕಡ್ಡಾಯಗೊಳಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಟಿಇಟಿ ಯನ್ನು ರದ್ದುಗೊಳಿಸುವ ಕಾನೂನನ್ನು ಕೇಂದ್ರ ಸರ್ಕಾರ ರಚಿಸದೇ ಹೋದರೆ ಭವಿಷ್ಯದಲ್ಲಿ ಮತ್ತೊಂದು ಸಭೆ ನಡೆಸಿ ರಾಷ್ಟç ಮಟ್ಟದಲ್ಲಿ ಇನ್ನು ಉಗ್ರ ಹೋರಾಟಕ್ಕೆ ಕರೆ ಕೊಡಲಾಗುವುದು ಎಂದು ಅವರು ಎಚ್ಚರಿಸಿದರು.
ಈಗಾಗಲೇ ೨೫-೩೦ ವರ್ಷ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವವರು ಕೂಡ ಕಡ್ಡಾಯವಾಗಿ ಟಿಇಟಿ ಪಾಸ್ ಮಾಡಬೇಕೆಂಬ ತೀರ್ಪು ಮಾರಕವಾಗಿದೆ. ಟಿಇಟಿ ಎಂಬುದು ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದ್ದು, ಕರ್ನಾಟಕದಲ್ಲಿ ೨೦೧೪ರಲ್ಲಿ ಮೊದಲ ಬಾರಿಗೆ ಜಾರಿಗೆ ಬಂದಿದೆ. ಅದಕ್ಕೂ ಮೊದಲಿನ ಶಿಕ್ಷಕರು ಸಿಇಟಿ ಪರೀಕ್ಷೆಯನ್ನು ಪಾಸಾಗಿ ಶಿಕ್ಷಕರಾಗಿದ್ದಾರೆ. ಈಗ ಅವರು ಕೂಡ ಟಿಇಟಿ ಪರೀಕ್ಷೆ ಪಾಸಾಗಬೇಕಿದೆ. ಹೀಗಾಗಿ ಇದೀಗ ಅನಿವಾರ್ಯವಾಗಿ ಹೋರಾಟ ನಡೆಸಲಾಗಿದೆ ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷೆ ಪದ್ಮಲತಾ.ಜಿ, ಮಾರುತೇಶ್.ಆರ್, ಸಂಘಟನಾ ಕಾರ್ಯದರ್ಶಿ ಪ್ರಮೀಳಾ.ಟಿ.ಕಾಮನಹಳ್ಳಿ ಹಲವಾರು ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು, ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿ ದೆಹಲಿ ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ಪ್ರಧಾನ ಕಾರ್ಯದರ್ಶಿ ಚೇತನ್ ಹೆಚ್.ಎಸ್ ತಿಳಿಸಿದ್ದಾರೆ.

