ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ನರೇಗಾ ಯೋಜನೆಯು ೨೦೨೬–೨೭ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಸಂಯೋಜನೆಗಾಗಿ ಪ್ರತಿ ಗ್ರಾಮ ಪಂಚಾಯಿತಿಯು ಗ್ರಾಮಸಭೆ ಮತ್ತು ವಾರ್ಡ್ ಸಭೆಗಳನ್ನು ನವೆಂಬರ್ ೩೦ರ ಒಳಗಾಗಿ ನಡೆಸುವುದು ಕಡ್ಡಾಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ ಚಲುವಯ್ಯ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಮಾಹಿತಿ ನೀಡಿದ ಇಓ, ಗ್ರಾಮ ಪಂಚಾಯಿತಿಯು ಕ್ರಿಯಾ ಯೋಜನೆಯ ಹಣವನ್ನು ಸರಿಯಾಗಿ ಬಳಕೆಯಾಗುವಂತೆ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು ಯೋಜನೆ, ಚೆಕ್ ಡ್ಯಾಂಗಳು, ನಾಳೆ ಕಾಮಗಾರಿಗಳು, ಗ್ರೀನ್ ವಾಲ್ ಯೋಜನೆ, ಬಂಡೆಗಳು, ನೀರು ಸಂಗ್ರಹಣೆ ಸೇರಿದಂತೆ ಪರಿಸರ ಸಂರಕ್ಷಣೆಯ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿಯ ವಿವಿಧ ನೀರು ಮೂಲಗಳ ಅಭಾವ ಇರುವ ಪ್ರದೇಶಗಳಲ್ಲಿ ಶಾಶ್ವತ ನೀರು ಮೂಲಗಳ ರಚನೆ, ಗ್ರೀನ್ ವಾಲ್ ರೂಪಿಸುವುದು, ಬಂಡೆಗಳು ನಿರ್ಮಾಣ ಮಾಡುವುದು ಹಾಗೂ ಹನಿಗವನಗಳ ರಕ್ಷಣೆ ಮಾಡುವುದು ಮುಖ್ಯ ಗುರಿಯಾಗಿರಬೇಕು. ೪೨ ದಿನಗಳೊಳಗೆ ೨೦೨೬–೨೭ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ಸಮಸ್ಯೆ, ಆದ್ಯತೆ ಹಾಗೂ ಬೇಡಿಕೆಗಳನ್ನು ಗ್ರಾಮ ಪಂಚಾಯಿತಿ ದಾಖಲಿಸಬೇಕು.ತಾಲ್ಲೂಕು ಮಟ್ಟದ ಯೋಜನೆ ಅಡಿಯಲ್ಲಿ ಎಲ್ಲಾ ೧೪ ಗ್ರಾಮ ಪಂಚಾಯಿತಿ ಗಳಿಂದ ಬಂದ ಸಮಗ್ರ ಯೋಜನೆ ಸಂಗ್ರಹಣೆ ಮಾಡಲಾಗುವುದು. ೨೬೬ ಬೇಡಿಕೆಗಳನ್ನು “ಕ್ರಿಯೆಗಳು” ಎಂದು ದಾಖಲಿಸಲಾಗುವುದು.
ಗ್ರಾಮಸಭೆ ಪ್ರಕ್ರಿಯೆಯಲ್ಲಿ ತಪ್ಪದೇ ೧೦೦ ದಿನಗಳ ಕೆಲಸ, ಕುಡಿಯುವ ನೀರು, ನಾಳಾ ಕಾಮಗಾರಿಗಳು, ರಸ್ತೆ ಸುಧಾರಣೆ, ಪರಿಸರ ಸಂರಕ್ಷಣೆ ಹಾಗೂ ಗ್ರೀನ್ ವಾಲ್ ನಿರ್ಮಾಣಕ್ಕೆ ಸಂಬಂಧಿಸಿದ ಸಲಹೆಗಳು ಮತ್ತು ಬೇಡಿಕೆಗಳನ್ನು ಗ್ರಾಮಸ್ಥರು ನೀಡಬೇಕು, ಉದ್ಯೋಗ ಚೀಟಿ ಹೊಂದಿದ ಪ್ರತಿಯೊಂದು ಕುಟುಂಬಕ್ಕೆ ೧೦೦ ದಿನಗಳ ಕೆಲಸ ನೀಡಬೇಕು ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಸಿದ್ದು ಕಾಂಬಳೆ ಹಾಗೂ ಸಿಬ್ಬಂದಿ ಇದ್ದರು.
