ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರ ವತಿಯಿಂದ ಕಮಲಾದೇವಿ ಪಾಟೀಲ ಮೆಮೋರಿಯಲ್ ಎಜ್ಯುಕೇಶನಲ್ ಅಸೋಸಿಯೇಶನ್ ಹಾಗೂ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲೆ- ನಾಡು ನುಡಿ ಚಿಂತನ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಕಮ್ಮಟ ನವೆಂಬರ್ ೨೭ರ ಬೆಳಿಗ್ಗೆ ೧೦ಗಂಟೆಗೆ ಸಾಯಿ ಪಾರ್ಕ್ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಜಯಪುರದ ಚಾಣಕ್ಯ ಕರಿಯರ್ ಅಕ್ಯಾಡೆಮಿಯ ಸಂಸ್ಥಾಪಕರಾದ ಎನ್.ಎಂ.ಬಿರಾದಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ನೇಗಿಲಯೋಗಿ ಟ್ರಸ್ಟಿನ ಅಧ್ಯಕ್ಷರಾದ ಡಾ.ಎಚ್.ಆರ್.ಸ್ವಾಮಿ ಭಾಗವಹಿಸಲಿದ್ದು,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ ಹಾನಗಲ್ಲ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ ಉಪಸ್ಥಿತರಿರಲಿದ್ದಾರೆ. ಆದಿಲ್ ಶಾಹಿ ಸಾಹಿತ್ಯ – ಕನ್ನಡ ಅನುವಾದಗಳು ವಿಷಯವಾಗಿ ಕಲಬುರಗಿ ಸಾರಿಗೆ ಇಲಾಖೆಯ ವಿಶ್ರಾಂತ ಅಧೀಕ್ಷಕರಾದ ರಿಯಾಜ್ ಅಹ್ಮದ ಬೋಡೆ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಂದು ಮಧ್ಯಾಹ್ನ ೧೨ ರಿಂದ ೧.೩೦ರವರೆಗೆ ಗೋಷ್ಠಿ-೧ರ ವಚನ ಸಂಗೋಪನೆ ಮತ್ತು ಹಳಕಟ್ಟಿಯವರ ಕೊಡುಗೆ ಕುರಿತು ಟಕ್ಕಳಕಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಬನಶ್ರೀ ಹತ್ತಿ ಹಾಗೂ ಗಡಿ ಭಾಗದ ಕನ್ನಡ ಶಾಲೆಗಳು ಮತ್ತು ಸ್ಥಿತಿಗತಿಯ ಕುರಿತು ಬೆಂಗಳೂರಿನ ಎಂವಿಜೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಮದಗೊಂಡ ಬಿರಾದಾರ ಅವರು ವಿಷಯ ಮಂಡಿಸಲಿದ್ದಾರೆ. ಗೋಷ್ಠಿ-೧ರ ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ವ್ಹಿ.ಎಂ. ಸುರಪುರ ಅವರು ವಹಿಸಲಿದ್ದಾರೆ.
ಮಧ್ಯಾಹ್ನ ೨.೩೦ ರಿಂದ ಸಂಜೆ ೪ಗಂಟೆಯವರೆಗೆ ನಡೆಯಲಿರುವ ಗೋಷ್ಠಿ-೨ರ ಗೋಕಾಕ ಚಳುವಳಿ ಮತ್ತು ವಿಜಯಪುರ ಜಿಲ್ಲೆ ವಿಷಯವಾಗಿ ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಂ.ಎಂ ಪಡಶೆಟ್ಟಿ ಹಾಗೂ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಮತ್ತು ಕನ್ನಡದ ಏಳಿಗೆ ಕುರಿತು ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಶ್ರೀಮತಿ ದಾಕ್ಷಾಯಿಣಿ ಬಿರಾದಾರ ವಿಷಯ ಮಂಡಿಸುವರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಜಂಬಗಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಣುಕಾ ವೈ ಕೊಣ್ಣೂರ ಅವರು ವಹಿಸಲಿದ್ದಾರೆ.
ಅಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು,ರಾಜ್ಯಸಭೆಯ ಮಾಜಿ ಸದಸ್ಯರೂ ಆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್ ಹನುಮಂತಯ್ಯ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಟಿ ಮೇರವಾಡೆ ಅವರು ಅಧ್ಯಕ್ಷತೆ ವಹಿಸಲಿದ್ದು, ಪ್ರಜಾವಾಣಿಯ ಜಿಲ್ಲಾ ವರದಿಗಾರ ಬಸವರಾಜ ಸಂಪಳ್ಳಿ ಅವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
