ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಕಡಿವಾಣ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಶಾಲಾ ಕಾಲೇಜಿನಲ್ಲಿ ಮಾದಕ ದ್ರವ್ಯ ನಿರ್ಮೂಲನಾ ಘಟಕ ಸ್ಥಾಪಿಸಿ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮಾದಕ ದ್ರವ್ಯಗಳ ನಿರ್ಮೂಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು. ಜಿಲ್ಲೆಯ ಎಲ್ಲ ಶಾಲಾ-ಕಾಲೇಜ್‌ಗಳಲ್ಲಿ ಮಾದಕ ದ್ರವ್ಯ ನಿರ್ಮೂಲನಾ ಘಟಕ ಸ್ಥಾಪನೆ ಮಾಡಿ, ಘಟಕಗಳ ಮೂಲಕ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ಜಾಗೃತಿ ಮೂಡಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಎಲ್ಲ ಪ್ರೌಢಶಾಲಾ, ಪದವಿಪೂರ್ವ, ಪದವಿ ಕಾಲೇಜ್ ಪ್ರಾಂಶುಪಾಲ, ಮುಖ್ಯೋಪಾಧ್ಯಾಯ ಹಾಗೂ ವಸತಿ ನಿಲಯಗಳ ವಾರ್ಡನ್‌ಗಳಿಗೆ ಡಿಸೆಂಬರ್ ಮೊದಲನೇ ವಾರದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಂಡು, ಪೊಕ್ಸೋ ಕಾಯ್ದೆ, ಕೊಟ್ಪಾ ಕಾಯ್ದೆ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆಗಳು, ಸೈಬರ್ ಕ್ರೈಂ, ಮಾದಕ ದ್ರವ್ಯಗಳ ಸೇವನೆ- ತಂಬಾಕು ಸೇವನೆಯಿಂದಾಗು ದುಷ್ಪರಿಣಾಮಗಳ ಕುರಿತು ಆಯಾ ವಿಷಯಗಳ ಪರಿಣಿತ ತಜ್ಞರನ್ನು, ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಿ ಅವರಿಂದ ಉಪನ್ಯಾಸ ಮೂಲಕ ಸಮಗ್ರ ಮಾಹಿತಿ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸುವಂತೆ ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲಾ ಕಾಲೇಜ್‌ಗಳಲ್ಲಿ ಸ್ಥಾಪಿಸಲಾದ ಮಾದಕ ದ್ರವ್ಯ ನಿರ್ಮೂಲನಾ ಘಟಕಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕನಿಷ್ಠ ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲಾ-ಕಾಲೇಜ್‌ಗಳಲಿ ಘಟಕ ಸ್ಥಾಪಿಸುವ ಮೂಲಕ ಮಕ್ಕಳಿಗೆ ತಿಳುವಳಿಕೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು. ನೋಡಲ್ ಅಧಿಕಾರಿಗಳು ಕಾಲೇಜ್ ಘಟಕಗಳಿಗೆ ಕಾಲಕಾಲಕ್ಕೆ ಅಗತ್ಯ ಸಲಹೆ ಸೂಚನೆ ನೀಡುವ ಮೂಲಕ ಹಾಗೂ ವಿವಿಧ ಕ್ರೀಯಾತ್ಮಕ ಚಟುವಟಿಕೆಗಳಾದ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕ್ವಿಜ್ ಸ್ಪರ್ಧೆ ಆಯೋಜನೆ ಮಾಡಬೇಕು. ಮಾದಕ ಅಂಶಗಳುಳ್ಳ ಔಷಧಿಗಳನ್ನು ಔಷಧ ಮಳಿಗೆಗಳು ಕಡ್ಡಾಯವಾಗಿ ವೈದ್ಯರ ಅನುಮತಿ ಪಡೆದವರಿಗೆ ಮಾತ್ರ ನೀಡಬೇಕು.
ಸಭೆಯಲ್ಲಿ ಮಹಿಳಾ ಕಲ್ಯಾಣ ವಿಭಾಗದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ೨೦೦೫ ನಿಯಮ ೨೦೦೬, ಬಾಲ್ಯವಿವಾಹ, ಪೊಕ್ಸೋ ಕಾಯ್ದೆ ಕುರಿತು ಪ್ರಗತಿ ಪರಿಶೀಲನೆ ನಡೆಸಲಾಯಿತು.
ಜಿಲ್ಲೆಯಾದ್ಯಂತ ಕಳೆದ ೦೩ ವರ್ಷಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ೮೫ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ೮೯೩.೩೩೨ ಕೆ.ಜಿ. ಮಾದಕ ದ್ರವ್ಯವನ್ನು ಜಪ್ತು ಮಾಡಲಾಗಿದೆ. ೮೭೬.೨೧೪ ಕೆ.ಜಿ. ಮಾದಕ ದ್ರವ್ಯಗಳನ್ನು ನಾಶಪಡಿಸಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಅನುರಾಧಾ ವಸ್ತçದ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಮ ಬಾಬಾ ಮುದ್ದೇಬಿಹಾಳ, ಅಬಕಾರಿ ಉಪ ಆಯುಕ್ತ ಮುರಳೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್‌ಕುಮಾರ ಗುಣಾರಿ, ಪೀಟರ್ ಅಲೆಕ್ಸಾಂಡರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

