’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ನಗರದ ಸಮಾಜಸೇವಕ ಹಾಗೂ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಅವರು ನೊಂದವರ ಕಣ್ಣೀರು ಒರೆಸಲು ಸದಾ ಮುಂಚೂಣಿಯಲ್ಲಿರುವವರು. ರಾಜಕೀಯ ರಂಗದಲ್ಲಿ ಇಂತಹ ವ್ಯಕ್ತಿತ್ವದವರು ಅಪರೂಪ ಎಂದು ’ಉದಯರಶ್ಮಿ’ ದಿನಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಶ್ಲಾಘಿಸಿದರು.
ನಗರದ ತಮ್ಮ ಸ್ವಗ್ರಹ ’ರಮ್ಯರಶ್ಮಿ’ ವಿಲ್ಲಾದಲ್ಲಿ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಅವರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಲವಾರು ವರ್ಷಗಳಿಂದ ಶ್ರೀಶೈಲಗೌಡ ಅವರನ್ನು ಹತ್ತಿರದಿಂದ ಕಂಡಿರುವ ನನಗೆ ಅವರ ವ್ಯಕ್ತಿತ್ವದ ಪರಿಚಯವಿದೆ. ಯಾರನ್ನೂ ನೋಯಿಸದ ಇವರ ಮೆದು ನುಡಿಗಳಂತೆ ಅವರ ನಡೆಯೂ ಸಹ ಶುಭ್ರವಾಗಿದೆ. ಕಲುಷಿತಗೊಂಡಿರುವ ಇಂದಿನ ರಾಜಕೀಯ ವ್ಯವಸ್ಥೆ ಬದಲಾಗಲು ಈ ರಂಗದಲ್ಲಿ ಇಂಥವರ ಸಂಖ್ಯೆ ವೃದ್ಧಿಸಬೇಕು ಎಂದು ಇಂದುಶೇಖರ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಮತ್ತು ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅವರ ಆಯ್ಕೆಯನ್ನು ಅಭಿನಂದಿಸಿ, ಅವರಿಗೆ ಸಿಹಿ ತಿನ್ನಿಸಿ, ಸನ್ಮಾನಿಸಿ ಗೌರವಿಸಿದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಮಾತನಾಡಿ, ಕಳೆದ ಎರಡು ದಶಕಗಳಿಂದ ಪತ್ರಿಕಾರಂಗದಲ್ಲಿ ಸದಾ ಕ್ರಿಯಾಶೀಲರಾಗಿರುವ ಹಿರಿಯ ಪತ್ರಕರ್ತದ್ವಯರಾದ ಅಶೋಕ ಮತ್ತು ಇಂದುಶೇಖರ ಅವರು, ತಮ್ಮ ವೃತ್ತಿಜೀವನದಲ್ಲಿ ಪಾರದರ್ಶಕತೆಯನ್ನು, ವೃತ್ತಿ ಬದ್ಧತೆಯನ್ನು ಕಾಪಾಡಿಕೊಂಡು ಬಂದವರು. ಇವರ ನೇತೃತ್ವದಲ್ಲಿ ಸಂಘವು ಇನ್ನಷ್ಟು ಪ್ರಗತಿ ಸಾಧಿಸಲಿ. ಜಿಲ್ಲೆಯ ಪತ್ರಕರ್ತರ ಹಿತಾಸಕ್ತಿ ರಕ್ಷಣೆಗೆ ಇವರು ಸದಾ ಮುಂದಿರಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖಂಡ ಮಲ್ಲಣ್ಣ ಮನಗೂಳಿ ಮಾತನಾಡಿ, ಪತ್ರಕರ್ತರು ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಈ ದಿಸೆಯಲ್ಲಿ ಅಶೋಕ ಮತ್ತು ಇಂದುಶೇಖರ ಅವರ ವೃತ್ತಿಬದ್ಧತೆಯನ್ನು ಪ್ರಶ್ನಿಸುವಂತಿಲ್ಲ ಎಂದು ನುಡಿದರು.

ಸಂಘದ ಅಭಿವೃದ್ಧಿಗೆ ಬದ್ಧ :ಅಶೋಕ ಯಡಳ್ಳಿ
ವಿಜಯಪುರ: ಇತ್ತೀಚಿಗೆ ಆಲಮೇಲ ಭಾಗದಲ್ಲಿ ನೆರೆಹಾವಳಿಗೆ ತುತ್ತಾದ ಸಂತ್ರಸ್ಥರ ನೆರವಿಗೆ ಧಾವಿಸಿದ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಅವರ ಸಾಮಾಜಿಕ ಕಳಕಳಿಯನ್ನು ಹತ್ತಿರದಿಂದ ಕಂಡಿರುವೆ. ಪ್ರಚಾರದ ಹಂಗಿಲ್ಲದೇ ಸೇವೆ ಮಾಡುವ ಇಂಥವರು ಈ ದಿನಗಳಲ್ಲಿ ವಿರಳ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ ಹೇಳಿದರು.
ನಗರದಲ್ಲಿ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಅವರಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಶ್ರೀಶೈಲಗೌಡರ ಆಶಯದಂತೆ ಒಂದೇ ಕುಟುಂಬದ ಸದಸ್ಯರಂತಿರುವ ನಮ್ಮೆಲ್ಲ ಪದಾಧಿಕಾರಿಗಳ ಸಹಕಾರದೊಂದಿಗೆ ನಮ್ಮ ಸಂಘದ ಅಭಿವೃದ್ಧಿಗೆ ಸಮರ್ಪಣಾ ಭಾವದಿಂದ ಶ್ರಮಿಸುವೆ. “ಹೇಳದೇ ಮಾಡುವವನು ರೂಢಿಯೊಳಗುತ್ತಮನು” ಎಂಬಂತೆ ನಾವು ಮಾಡಿದ ಅಭಿವೃದ್ಧಿ ಕೆಲಸಗಳೇ ಮಾತನಾಡಬೇಕು, ಹಾಗೆ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.

