ಉದಯರಶ್ಮಿ ದಿನಪತ್ರಿಕೆ
ಚಡಚಣ: ಬೀದಿ ನಾಯಿಗಳ ಹೆಚ್ಚುತ್ತಿರುವ ಹಾವಳಿಯಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಮಕ್ಕಳಿಗೆ ತಲೆನೋವು ಹೆಚ್ಚಾಗಿದೆ. ನಿರಂತರವಾಗಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಳ್ಳುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನ.07 ರಂದು ಸುಪ್ರೀಂ ಕೋರ್ಟ್ ಆದೇಶದಂತೆ ಹಾಗೂ ವಿಜಯಪುರ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಚಡಚಣ ಪಟ್ಟಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೀದಿ ನಾಯಿಗಳನ್ನು ನಿಯಂತ್ರಿಸುವ ವಿಶೇಷ ಕಾರ್ಯಾಚರಣೆ ಬುಧವಾರದಿಂದ ಆರಂಭಿಸಲಾಗಿದೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳಲ್ಲಿಯೂ ಬೀದಿ ನಾಯಿಗಳನ್ನು ಹಿಡಿದು, ಅವುಗಳಿಗೆ ಹುಚ್ಚುನಾಯಿ (ರೇಬಿಸ್) ರೋಗ ಪ್ರತಿಬಂಧಕ,ನಿರೋಧಕ ಲಸಿಕೆ(ಆಂಟಿ ರಾಬಿಸ್ ವ್ಯಾಕ್ಸಿನ್)ನೀಡಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಹೆಣ್ಣು ನಾಯಿಗಳಿಗೆ ಸಂತಾನ ಹರಣ (ಸ್ಟೆರಿಲೈಜೇಶನ್) ಪ್ರಕ್ರಿಯೆಯನ್ನೂ ಕೈಗೊಳ್ಳಲಾಗುತ್ತದೆ. ಸರ್ಕಾರ ನಿರ್ದೇಶಿಸಿದಂತೆ ಈ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಗ್ರಾಮ-ಹಳ್ಳಿಗಳಲ್ಲಿಯೂ ಬೀದಿ ನಾಯಿಗಳನ್ನು ಹಿಡಿದು ಆಂಟಿ ರಾಬಿಸ್ ವ್ಯಾಕ್ಸಿನ್ ಹಾಕಲಾಗುತ್ತದೆ ಎಂದು ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಎಸ್.ಗಂಗನಳ್ಳಿ ಹೇಳಿದರು.
ಬೀದಿ ನಾಯಿಗಳ ದಾಳಿಯಿಂದ ಮಕ್ಕಳಿಗೆ ಗಂಭೀರ ಗಾಯವಾಗುತ್ತಿರುವುದು ಗಮನಕ್ಕೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮಗಳು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಆದ್ದರಿಂದ ಅವರ ಆದೇಶದಂತೆ ನಾವು ಮತ್ತು ನಮ್ಮ ಚಡಚಣ ಪಶುಪಾಲನೆ ಇಲಾಖೆಯವರು ಈ ಕಾರ್ಯಕ್ರಮ ಮಾಡುತ್ತಿದ್ದೆವೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವ ಜೊತೆಗೆ ರೇಬಿಸ್ ರೋಗ ಹರಡುವಿಕೆ ತಡೆಯುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಇದೆ ವೇಳೆ, ಸಾಕು ನಾಯಿಗಳಿಗೆ ಸಹ ಲಸಿಕೆ ನೀಡಲಾಗುತ್ತದೆ. ಸಾಕು ನಾಯಿಗಳನ್ನು ಹೊಂದಿರುವ ಮಾಲೀಕರು ತಮ್ಮ ನಾಯಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದು ಚಡಚಣ ಪಶುವೈದ್ಯಾಧಿಕಾರಿ ಡಾ. ಪ್ರಮೋದ್ ಹೋರ್ತಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಸಿಓ ಬಿಕೆ ತಾವಸೆ,ಪ.ಪಂ.ಸಿಬ್ಬಂದಿ, ಪಶುವೈದ್ಯಾಧಿಕಾರಿ ಅಗಳಿ, ಸಿಬ್ಬಂದಿ ಹಿರೇಮಠ ಹಾಗೂ ಪಶುಪಾಲನೆ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಸಾರ್ವಜನಿಕರು ಸಹಕಾರ ನೀಡುವಂತೆ ಪಂಚಾಯಿತಿ ಸಿಓ ಬಿಕೆ ತಾವಸೆ ಹಾಗೂ ಪಶುಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ.ಎಸ್. ಗಂಗನಳ್ಳಿ ಮನವಿ ಮಾಡಿದ್ದಾರೆ.

