ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಹವ್ಯಾಸಗಳು ನಮ್ಮ ಬದುಕನ್ನು ರೂಪಿಸುತ್ತವೆ. ಮಕ್ಕಳ ಬಾಲ್ಯಾವಸ್ಥೆ ಅವರ ಬದುಕಿಗೆ ಅತ್ಯವಶ್ಯಕವಾದ ಮೂಲಭೂತ ಬುನಾದಿಯನ್ನು ಹಾಕಿದರೆ ಪ್ರೌಢಾವಸ್ಥೆಯಲ್ಲಿ ಅವುಗಳನ್ನು ಪರಿಪಾಲಿಸುವುದು ಸರಳವಾಗುತ್ತದೆ.
ನಾವು ಚಿಕ್ಕಂದಿನಲ್ಲಿ ಮಕ್ಕಳಿಗೆ ನಿತ್ಯವಿಧಿಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಲು ಅಭ್ಯಾಸ ಮಾಡಿಸಬೇಕು ಎಂಬುದನ್ನು ಈ ಹಿಂದಿನ ಸಂಚಿಕೆಯಲ್ಲಿ ಅರಿತಿದ್ದೇವೆ. ಹಾಗೆ ಮಕ್ಕಳಲ್ಲಿ ನಿತ್ಯ ಕರ್ಮಗಳನ್ನು, ಒಳ್ಳೆಯ ಆಹಾರದ ಅಭ್ಯಾಸಗಳನ್ನು ಚಿಕ್ಕಂದಿನಲ್ಲಿಯೇ ಅವರ ಜೀವನದ ಭಾಗವಾಗಿ ರೂಢಿಸಬೇಕು. ಆಹಾರದ ರುಚಿ, ಸತ್ವ, ಹಣ್ಣು ತರಕಾರಿಗಳ ಸೇವನೆಯಿಂದಾಗುವ ಪ್ರಯೋಜನಗಳು ನಾರಿನ ಪದಾರ್ಥಗಳ, ದ್ವಿದಳ ಧಾನ್ಯಗಳ ಕುರಿತ ಜ್ಞಾನವನ್ನು ಪಾಲಕರಾದವರು ಪ್ರತಿದಿನ ಮಾಹಿತಿಯ ರೂಪದಲ್ಲಿ ಮಕ್ಕಳೊಂದಿಗೆ ಹಂಚಿಕೊಳ್ಳಬೇಕು.
ಮಕ್ಕಳು ಆಟ ಪಾಠಗಳಲ್ಲಿ ಭಾಗಿಯಾಗಬೇಕು. ಆಟಗಳು ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೊಂದಾಣಿಕೆ, ಅಭಿಮಾನ ಮತ್ತು ಆತ್ಮಸ್ಥೈರ್ಯಗಳನ್ನು ಬೆಳೆಸುತ್ತವೆ. ಮಕ್ಕಳು ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ಕೂಡ ರೂಢಿಸಬೇಕು. ನಿಯಮಿತವಾದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಆಟೋಟಗಳು ಮತ್ತು ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡರೆ ಒಳ್ಳೆಯ ಜೀವನವನ್ನು ಸಾಗಿಸಲು ಸಹಕಾರಿಯಾಗುತ್ತದೆ.
ಏಷ್ಯಾ ಖಂಡದ ವಾಸಿಗಳಾದ ನಾವುಗಳು ವಾಸಿಸುತ್ತಿರುವ ಪರಿಸರಕ್ಕೆ ಅನುಗುಣವಾಗಿ ನಮ್ಮ ಜೀವನ ಮತ್ತು ಆಹಾರ ಕ್ರಮವನ್ನು ರೂಪಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಉತ್ತರ ಭಾಗದಲ್ಲಿ ಹಿಮ ಸುರಿಯುತ್ತಿದ್ದರೆ ದಕ್ಷಿಣ ಭಾಗದಲ್ಲಿ ರಣ ರಣ ಬಿಸಿಲು. ಇಲ್ಲಿ ಅಗ್ನಿಯ ಪ್ರಭಾವ ತುಸು ಹೆಚ್ಚೇ ಇರುತ್ತದೆ. ಖಾರದ ಮತ್ತು ತೀಕ್ಷ್ಣವಾದ ಹುಳಿ ಪದಾರ್ಥಗಳು ನಮ್ಮಲ್ಲಿ ಅಜೀರ್ಣವನ್ನು ಉಂಟು ಮಾಡಬಹುದು. ಮಧ್ಯಾಹ್ನದ ಸಮಯದಲ್ಲಿ ದೇಹದ ಉಷ್ಣತೆಯನ್ನು ತಗ್ಗಿಸಲು ನಾವು ಮೊಸರು ಮಜ್ಜಿಗೆಯನ್ನು ಊಟದಲ್ಲಿ ಬಳಸುತ್ತೇವೆ . ಎಷ್ಟೋ ಬಾರಿ ರಾತ್ರಿಯ ಸಮಯದಲ್ಲಿಯೂ ಕೂಡ ಇವುಗಳ ಅವಶ್ಯಕತೆ ನಮಗಿದೆ.

ಇನ್ನು ಪ್ರತಿದಿನ ಸಂಜೆ ಶಾಲೆಯಿಂದ ಬಂದ ಕೂಡಲೇ ಕೈ ಕಾಲು ಮುಖ ತೊಳೆದು ತಾಯಿ ಕೊಟ್ಟ ತಿಂಡಿ ತಿಂದು ಹಾಲು ಕುಡಿದು ಆಟವಾಡಿದ ಮಕ್ಕಳು ಮತ್ತೆ ಮನೆಗೆ ಬಂದು ಶಾಲೆಯಲ್ಲಿ ಕೊಟ್ಟ ಮನೆ ಪಾಠವನ್ನು ಬರೆದು ಓದಿ ಮುಗಿಸಬೇಕು. ಇದು ಮಕ್ಕಳ ಕೆಲಸವಾದರೆ ಪಾಲಕರು ಮಕ್ಕಳಿಗೆ ರಾತ್ರಿ 8:00 ಗಂಟೆಗೆ ರಾತ್ರಿಯ ಊಟವನ್ನು ಮಾಡಿಸಲೇಬೇಕು. ರಾತ್ರಿಯ ಊಟವನ್ನು ಎಂಟು ಗಂಟೆಗೆ ಮುಂಚೆ ಮಾಡಿಸುವುದರಲ್ಲಿ ಬಹಳಷ್ಟು ಅನುಕೂಲಗಳು ಇವೆ. 8 ಗಂಟೆಗೆ ಆಹಾರವನ್ನು ಸೇವಿಸುವ ಮಕ್ಕಳ ಪಚನ ಕ್ರಿಯೆ ಸರಿಯಾಗಿ ಆಗಿ ಮುಂಜಾನೆ ಅಲರಾಂ ಕೂಗುವ ಮುನ್ನವೇ, ಪಾಲಕರು ಎಬ್ಬಿಸುವ ಮುನ್ನವೇ
ಮಕ್ಕಳು ಎದ್ದು ತಮ್ಮ ದೈನಂದಿನ ಕ್ರಿಯೆಗಳಲ್ಲಿ ತೊಡಗಲು ಅನುಕೂಲವಾಗುತ್ತದೆ. ಹಾಗೆ ಬೇಗನೆ ಏಳುವ ಮಕ್ಕಳು ಮುಂಜಾನೆ ಓಡುವ, ನಡೆಯುವ, ವ್ಯಾಯಾಮ ಮಾಡುವ ಕ್ರಿಯೆಗಳಲ್ಲಿ ತೊಡಗುತ್ತಾರೆ ಇಲ್ಲವೇ ತಮ್ಮ ಶಾಲೆಯ ಪಠ್ಯ ಚಟುವಟಿಕೆಗಳಲ್ಲಿ, ಓದು ಬರಹಗಳಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನು ರಾತ್ರಿ ಬೇಗನೆ ಊಟ ಮಾಡುವುದರಿಂದ ಮಕ್ಕಳು ಬೆಳಗಿನ ಜಾವ ಬೇಗನೆ ಎದ್ದು ಮನೋದೈಹಿಕ ಶ್ರಮದ ಕೆಲಸಗಳಲ್ಲಿ ತೊಡಗಿಕೊಳ್ಳುವ ಕಾರಣ ಪಾಲಕರು ಅವರ ಹಿಂದೆ ತಿಂಡಿಯ ತಟ್ಟೆಯನ್ನು ಹಿಡಿದುಕೊಂಡು ಓಡಾಡುವ ಮುನ್ನವೇ ಮಕ್ಕಳು ಹಸಿದು ಮುಂಜಾನೆಯ ತಿಂಡಿಯನ್ನು ಸೇವಿಸುತ್ತಾರೆ. ಈ ರೀತಿ ಬೇಗನೇ ತಿಂಡಿಯನ್ನು ಸೇವಿಸುವ ಮಕ್ಕಳ ಮೆದುಳು ಚುರುಕಾಗಿದ್ದು ಶಾಲೆಯ ತರಗತಿಯಲ್ಲಿ ಕುಳಿತುಕೊಳ್ಳುವ ಮಕ್ಕಳು ಪಠ್ಯಗಳನ್ನು ಗಮನವಿಟ್ಟು ಕೇಳುತ್ತಾರೆ. ಇದು ಅವರಲ್ಲಿನ ಜಾಣತನ ಹೆಚ್ಚಾಗುವ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಬಾಲ್ಯಾವಸ್ಥೆಯಲ್ಲಿ ರೂಢಿಸಿಕೊಂಡ ಮೌಲ್ಯವರ್ಧಿತ ಚಟುವಟಿಕೆಗಳು ಅವರ ಬದುಕನ್ನು ಬೆಳಗುತ್ತವೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಸ್ವಾವಲಂಬಿತನವನ್ನು ರೂಢಿಸಬೇಕು. ತಮ್ಮ ಶಾಲಾ ಪಠ್ಯಪುಸ್ತಕಗಳನ್ನು ಬ್ಯಾಗನ್ನು ಎತ್ತಿ ಇಡಲು, ತಮ್ಮ ತಟ್ಟೆ ಲೋಟಗಳನ್ನು ತಾವೇ ಸಿಂಕಿನಲ್ಲಿ ಹಾಕಿ ಬರುವುದನ್ನು, ತಮ್ಮ ಶಿವುಗಳನ್ನು ಸಾಕ್ಸ್ ಗಳನ್ನ ಒಂದೆಡೆ ಇಡುವುದನ್ನು ತಮ್ಮ ಚಿಕ್ಕ ಪುಟ್ಟ ಕೆಲಸಗಳನ್ನು ತಾವೇ ನಿರ್ವಹಿಸಿಕೊಳ್ಳುವುದನ್ನು ಕಲಿಯಬೇಕು. ಹೀಗೆ ಮಕ್ಕಳನ್ನು ಸ್ವಾವಲಂಬಿಯನ್ನಾಗಿಸುವ ಮೂಲಕ ಅವರ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಹಾಕಬಹುದು.
ಇನ್ನು ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಅವರವರ ಕೆಲಸ ಕಾರ್ಯಗಳ ಜವಾಬ್ದಾರಿಯನ್ನು ನಿಧಾನವಾಗಿ ಅವರಿಗೆ ಹೊರಿಸುತ್ತಾ ಹೋದರೆ ಮುಂದೆ ಮಕ್ಕಳು ದೊಡ್ಡವರಾದ ಮೇಲೆ ಅವರು ತಮ್ಮ ಸಂಪೂರ್ಣ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುತ್ತಾರೆ. ಇದು ಪಾಲಕರು ತಮಗೆ ವಯಸ್ಸಾದ ಕಾಲದಲ್ಲಿ ಯಾವುದೇ ರೀತಿಯ ಒತ್ತಡಗಳಿಲ್ಲದೆ ಬದುಕಲು ಸಹಾಯಕವಾಗುತ್ತದೆ. ಚಿಕ್ಕಂದಿನಿಂದಲೇ ತಮ್ಮ ಪೆನ್, ಪೆನ್ಸಿಲ್ ಮತ್ತಿತರ ಸಲಕರಣೆಗಳನ್ನು ಎತ್ತಿಟ್ಟುಕೊಳ್ಳುವ ಮಕ್ಕಳು ಮುಂದೆ ದೊಡ್ಡವರಾದ ಮೇಲೆ ತಮ್ಮ ಎಲ್ಲ ಸರ್ಟಿಫಿಕೇಟ್ಗಳನ್ನು ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್,ಪಾಸ್ಪೋರ್ಟ್ ಸೈಜ್ ಫೋಟೋಗಳು ಹೀಗೆ ಹತ್ತು ಹಲವು ದಾಖಲು ಪತ್ರಗಳನ್ನು ಸರಿಯಾಗಿ ಎತ್ತಿಟ್ಟುಕೊಳ್ಳಲು ಕಲಿಯುತ್ತಾರೆ.
ನಮ್ಮ ಮೂಲಭೂತ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನಗಳನ್ನು ಮಕ್ಕಳಿಗೆ ಕಲಿಸಬೇಕು. ಅವಶ್ಯಕತೆ ಇಲ್ಲವೇ ಇದ್ದಾಗ ವಿದ್ಯುತ್ ಉಪಕರಣಗಳನ್ನು ಬಂದ್ ಮಾಡುವದನ್ನು ಕಲಿಸಿಕೊಡಬೇಕು. ಎಷ್ಟೋ ಬಾರಿ ಮನೆಯಲ್ಲಿ ಬೆಳಕಿರುವಾಗಲೂ ಲೈಟುಗಳನ್ನು, ಫ್ಯಾನುಗಳನ್ನು ಅನವಶ್ಯಕವಾಗಿ ಹಾಕಿ ಹಾಗೆಯೇ ಬಿಟ್ಟಿರುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳು ಅನವಶ್ಯಕವಾಗಿ ಉರಿಸುವ ಲೈಟು ಫ್ಯಾನುಗಳನ್ನು ಬಂದ್ ಮಾಡಿ ನಮ್ಮ ಸಂಪನ್ಮೂಲಗಳನ್ನು ಉಳಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಕೊಡಬೇಕು.
ಹೀಗೆ ನಮ್ಮ ಮಕ್ಕಳ ಬದುಕಿನಲ್ಲಿ ಒಳ್ಳೆಯ ಹವ್ಯಾಸಗಳನ್ನು ರೂಡಿಸುವ ಮೂಲಕ ಮುಂದೆ ನಮ್ಮ ಮಕ್ಕಳು ನಮಗೆ ತಲೆ ನೋವಾಗುವ, ಹೊರೆಯಾಗುವ ತೊಂದರೆಗಳನ್ನು ತಪ್ಪಿಸಬಹುದು. ಉತ್ತಮ ಹವ್ಯಾಸಗಳು ಒಳ್ಳೆಯ ಬದುಕನ್ನು ರೂಪಿಸಿಕೊಳ್ಳಲು ಸಹಾಯಕ… ಅಂತಹ ಹವ್ಯಾಸಗಳನ್ನು ನಮ್ಮ ಮಕ್ಕಳ ಬದುಕಿನಲ್ಲಿ ಚಿಕ್ಕಂದಿನಿಂದಲೇ ರೂಢಿಸಬೇಕು. ಇಂದಿನ ಮಕ್ಕಳು ಮುಂದಿನ ಭವ್ಯ ಭವಿಷ್ಯದ ನಾಗರಿಕರು ಎಂಬುದನ್ನು ಅರಿತು ಅವರನ್ನು ಬೆಳೆಸಬೇಕು.


