ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಲಶಕ್ತಿ ಅಭಿಯಾನದ “ಜಲ ಸಂಚಯ–ಜನ ಭಾಗಿದಾರಿ” ವಿಶೇಷ ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಭಾರತ ಸರಕಾರದಿಂದ ನೀಡುವ ರಾಷ್ಟ್ರೀಯ ಪುರಸ್ಕಾರ ವಿಜಯಪುರ ಜಿಲ್ಲೆಗೆ ದೊರಕಿರುವುದು ಸಂತಸ ತಂದಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ ವತಿಯಿಂದ 11 ಸಾವಿರಕ್ಕೂ ಹೆಚ್ಚು ಚಿಕ್ಕ-ಚಿಕ್ಕ ಚೆಕ್ ಡ್ಯಾಂ, ಬಾಂದಾರಗಳ ನಿರ್ಮಾಣದಿಂದ ಮಳೆ ನೀರು ಇಂಗಿ ಅಂತರ್ ಜಲ ವೃದ್ಧಿಗೆ ಕಾರಣವಾಗಿದೆ. ಇದನ್ನು ಮನಗೊಂಡು ಭಾರತ ಸರ್ಕಾರದಿಂದ ಕೊಡಮಾಡುವ “ಜಲ್ ಸಂಚಯ-ಜನ ಭಾಗಿದಾರಿ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಕ್ಕೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆನಂದ ಕೆ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿನಾಥ ಕುಸನಾಳ, ವಿಜಯಪುರ ಮಹಾನಗರ ಆಯುಕ್ತ ವಿಜಯ ಮೆಕ್ಕಳಕಿ ಉಪಸ್ಥಿತರಿದ್ದರು.

