ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಂಪ್ರದಾಯಿಕ ಛಟ್ಟಿ ಜಾತ್ರೆಯ ಅಂಗವಾಗಿ ರಾವುತರಾಯನು ಪಲ್ಲಕ್ಕಿ ಉತ್ಸವದ ಮೂಲಕ ಮಲ್ಲಯ್ಯನ ದೇವಸ್ಥಾನ ಪ್ರವೇಶಿಸಿದನು.
ಪಟ್ಟಣದಲ್ಲಿ ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ನಂತರ ಜರುಗುವ ರಾವುತರಾಯನ ಪಲ್ಲಕ್ಕಿ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಮಲ್ಲಯ್ಯನ ದೇವಸ್ಥಾನ ತಲುಪಿದ ರಾವುತರಾಯನು ಪಲ್ಲಕ್ಕಿ ಉತ್ಸವ ಸೇರಿದಂತೆ ಸಾಂಪ್ರದಾಯಿಕ ಆಚರಣೆಗಳ ನಂತರ ದೇವಸ್ಥಾನದಲ್ಲಿ ಆಸೀನನಾದನು. ಛಟ್ಟಿ ಅಂಗವಾಗಿ ಕಾರ್ತಿಕೋತ್ಸವ ಹಾಗೂ ಮಹಾಪ್ರಸಾದ ನೆರವೇರಿಸಲಾಗುತ್ತಿದೆ. ನಂತರ ಪಲ್ಲಕ್ಕಿ ಉತ್ಸವದ ಮೂಲಕ ಮರಳಿ ಪಟ್ಟಣದ ತನ್ನ ದೇವಸ್ಥಾನಕ್ಕೆ ಮರಳುವನು.
ಸಾಂಪ್ರದಾಯಿಕವಾಗಿ ರಾವುತರಾಯ ಹೊರವಲಯದ ಮಲ್ಲಯ್ಯನ ದೇವಸ್ಥಾನದಲ್ಲಿ ಷಷ್ಠಿಯವರೆಗೆ ಅಂದರೆ ಆರು ದಿನಗಳವರೆಗೆ ಇದ್ದು ನಂತರ ಮರಳಿ ತನ್ನ ಮೂಲಸ್ಥಾನಕ್ಕೆ ಮರಳುವನು. ಈ ಛಟ್ಟಿ ಜಾತ್ರೆಯ ಅಂಗವಾಗಿ ಪ್ರತಿ ವರ್ಷ ಜಾನುವಾರಗಳ ಬೃಹತ್ ಪ್ರದರ್ಶನ, ಮಾರಾಟ ಮೇಳ ಹಾಗೂ ಅತ್ಯುತ್ತಮ ರಾಸುಗಳಿಗೆ ಬಹುಮಾನ ವಿತರಣೆಗಳು ಪ್ರತಿವರ್ಷದಂತೆ ಈ ಬಾರಿಯು ಜರುಗಲಿವೆ.
ಕಾರಣಿಕರ ಹೇಳಿಕೆಗಳು: ಪ್ರತಿವರ್ಷವು ಛಟ್ಟಿ ಜಾತ್ರೆಯ ಸಂದರ್ಭದಲ್ಲಿ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಹೇಳಿಕೆಗಳನ್ನು ಹೇಳುವ ಪದ್ಧತಿಯಿದ್ದು, ಈ ವರ್ಷ ಅವರು ಹೇಳಿದಂತೆ, ಬಿಳಿಕಾಳ ಕಟ್ಟಿ ಒಕ್ಕಳಾಯಿತು. ಕಡಲೆ, ಗೋಧಿ, ಅಗಸಿ, ಕುಸಬಿ ಜೋಳದ ಬೆನ್ನು ಹತ್ತಿದವು, ತೊಗರಿ ಹೊಲದಾಗ ರೈತ ನಕ್ಕೋತ ಇದ್ದ, ಬಜಾರಾದಾಗ ಅಳಕೋತ ಬಂದ, ಧರ್ಮ ಎನ್ನುದು ಎಲ್ಲಿ ಉಳಿಲಿಲ್ಲ, ಕರ್ಮ ಹೆಚ್ಚಾಯಿತು. ೩ನೇ ಮಹಾಯುದ್ಧ ಆಗುವ ಸಂಭವ ಅದ, ಯಾರು ನನ್ನಂತೆ ಇರತಿರೀ ಅವರಿಗೆ ನಾ ಅಂಗೈಲಿ ಹಿಡಿದು ರಕ್ಷಣಾ ಮಾಡತೀನಿ, ಹತ್ತು ಮಂದಿ ಒಂದೇ ತಾಯಿ ಮಕ್ಕಳಾಗಿ ನಡಕೊಂಡ ಇದ್ದರ ನಿಮ್ಮ ಬೆನ್ನ ಹಿಂದ ನಾನದೀನಿ, ನನ್ನ ಸೇವಾ ಮಾಡವರು ಬಾಳ ಎಚ್ಚರ, ನಿಮ್ಮ ಕರ್ಮ ನಿಮ್ಮ ಸುತ್ತ ಅದ. ಸಮಾಧಾನ, ಶಾಂತಿ ದೊಡ್ಡದು ಎಂದು ನುಡಿಯಲಾಯಿತು.

