ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಗ್ರಾಮ ಪಂಚಾಯಿತಿ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ಕೈಗೊಂಡು ಅನಿರ್ದಿಷ್ಟಾವಧಿ ಧರಣಿ ಕುಳಿತರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಸಭೆ ಸೇರಿದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ, ಸಿಐಯುಟಿ ತಾಲ್ಲೂಕು ಸಮಿತಿ ಹಾಗೂ ಕರ್ನಾಟಕ ರಾಜ್ಯ ಪಂಚಾಯತ್ ಕ್ಲರ್ಕ್ ಕಮ್ ಡಾಟಾಎಂಟ್ರಿ ಆಪರೇಟರ್ ನೌಕರರ ಸಂಘದ ಪದಾಧಿಕಾರಿಗಳು ಘೋಷಣೆಗಳೊಂದಿಗೆ ಮೆರವಣಿಗೆ ಹೊರಟು ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೊಂಡರು. ಈ ಸಂದರ್ಭದಲ್ಲಿ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ತಾಲ್ಲೂಕು ಘಟಕದ ಅಧ್ಯಕ್ಷ ರವಿ ಗೊಟೂರ ಮಾತನಾಡಿ, ಪ್ರತಿ ತಿಂಗಳ ೫ನೇ ದಿನಾಂಕದ ಒಳಗಾಗಿ ವೇತನ ನೀಡಬೇಕು, ಗ್ರಾಮ ಪಂಚಾಯಿತಿ ವರ್ಗ ರ ಖಾತೆಯಿಂದ ೪೦ ಪ್ರತಿಶತ ಅನುದಾನವನ್ನು ಗ್ರಾ.ಪಂ. ನೌಕರರ ವೇತನಕ್ಕಾಗಿ ಮೀಸಲಿಡಬೇಕು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡಬೇಕು. ಹೊಸ ನೇಮಕಾತಿ ಕೈಗೊಳ್ಳಬೇಕು, ನಿವೃತ್ತಿ ಉಪಧನ ನೀಡಬೇಕು, ಇಓ ರವರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕುಂದುಕೊರತೆ ಸಭೆಯನ್ನು ಪ್ರತಿ ತಿಂಗಳು ಮಾಡಬೇಕು ಎಂದರು. ನಂತರ ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚಲುವಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಓ, ಈಗಾಗಲೇ ಎರಡು ತಿಂಗಳ ವೇತನ ನೀಡಲಾಗಿದೆ. ಐದು ದಿನಗಳ ಒಳಗಾಗಿ ವೇತನ ನೀಡಲು ಎಲ್ಲ ಪಂಚಾಯತಿ ಪಿಡಿಓ ರವರಿಗೆ ಈಗಾಗಲೇ ಸೂಚಿಸಿದ್ದೇನೆ. ತಮ್ಮ ಎಲ್ಲ ಸಮಸ್ಯೆಗಳು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು,
ಪ್ರತಿ ಗ್ರಾಮ ಪಂಚಾಯಿತಿ ಪಿಡಿಓ ರವರು ಈ ಸಮಸ್ಯೆಗಳಿಗೆ ಉತ್ತರಿಸಬೇಕು ಅವರಿಂದಲೇ ನಮಗೆ ಭರವಸೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಎಡಿ ಮೂಲಿಮನಿ ಮಾತನಾಡಿ, ಐದು ದಿನಗಳ ಒಳಗಾಗಿ ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಸಲಾಗುವುದು. ಬಗೆಹರಿಯದೆ ಇದ್ದರೆ ಅದಕ್ಕೆ ಇಓ ಮತ್ತು ಎಡಿ ಜವಾಬ್ದಾರರು ಎಂದು ಪ್ರತಿಭಟನಾಕಾರರ ಮನವೊಲಿಸಿದರು.
ಎಡಿಪಿಆರ್ ಶಿವಾನಂದ ಮೂಲಿಮನಿ, ಗ್ರಾಮೀಣ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಶಾಂತಗೌಡ ನ್ಯಾಮಣ್ಣವರ, ಡಾಟಾ ಎಂಟ್ರಿ ಆಪರೇಟರ್ ತಾಲ್ಲೂಕು ಕಾರ್ಯದರ್ಶಿ ಪರಶುರಾಮ ಯಲಗೋಡ, ಉದಯಕುಮಾರ ಚರಂತಿಮಠ, ಶಿವಾನಂದ ನಾವಿ, ಸಿಐಯುಟಿ ತಾಲೂಕ ಅಧ್ಯಕ್ಷ ಶಿವಾನಂದ ಬಿರಾದಾರ, ಪ್ರಧಾನ ಕಾರ್ಯದರ್ಶಿ ಬಾಬುಸಾಬ ಟಕ್ಕಳಕಿ, ಅಮೀನ್ ಪಟೇಲ, ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್, ಬಿಲ್ ಕಲೆಕ್ಟರ್, ಸ್ವಚ್ಛತಾದಾರರು ಇದ್ದರು.

