ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗುರುವಿನ ಕೃಪೆ ಇಲ್ಲದೇ ಏನನ್ನೂ ಮಾಡಲು ಸಾಧ್ಯವಿಲ್ಲ. ಗುರುವಿನಂತಹ ಕರುಣಾ ಮೂರ್ತಿ ಜಗತ್ತಿನಲ್ಲಿ ಎಲ್ಲು ಸಿಗಲು ಸಾಧ್ಯವಿಲ್ಲ ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಸಿಂದಗಿ ತಾಲೂಕಿನ ಯಂಕಂಚಿ ಹಿರೇಮಠದ ಲಿಂ.ರುದ್ರಮುನಿ ಶಿವಾಚಾರ್ಯರರ ೪೮ನೆಯ ಪುಣ್ಯಾರಾಧನೆಯ ನಿಮಿತ್ಯ ಹಮ್ಮಿಕೊಂಡ ನವಲಗುಂದದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಪುರಾಣ ಪ್ರವಚನ ಹಾಗೂ ತುಲಾಭಾರ ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಅವರು, ಜೀವನದಲ್ಲಿ ಬಡತನ ಇದ್ದರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಪಾಲಕರು ಸಂಸ್ಕಾರ ನೀಡಿದರೆ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದರು.
ಈ ವೇಳೆ ಶಹಾಪೂರ ವಿಶ್ವಕರ್ಮ ಸರಸ್ವತಿ ಪೀಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಪುರಾಣ ಪ್ರವಚನ ನೀಡಿ ಮಾತನಾಡಿ, ಹರ ಮುನಿದರೆ ಗುರು ಕಾಯುವನು ಎಂಬಂತೆ ಗುರುವಿಗೆ ಅಗ್ರಸ್ಥಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಸದಾ ಕಾಲ ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಂಕಂಚಿ ನಿಂಗಣ್ಣ ವಿಶ್ವಕರ್ಮ, ಪಡದಳ್ಳಿ ಕಲ್ಲಯ್ಯಸ್ವಾಮಿ, ಮೋರಟಗಿಯ ರವಿ ವಿಭೂತಿ ಸಂಗೀತ ಸೇವೆಯನ್ನು ನಡೆಸಿಕೊಟ್ಟರು.
ಶಂಕರಗೌಡ ಸಾಹೇಬಗೌಡ ಬಿರಾದಾರ, ಬಂದಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ, ನಿವೃತ್ತ ಎಎಸ್‌ಆಯ್ ಮಡಿವಾಳಪ್ಪಗೌಡ ಬಿರಾದಾರ, ದೊಡ್ಡಮ್ಮ ಕೊಣ್ಣೂರ, ಗುತ್ತಪ್ಪಗೌಡ ಬೆಕಿನಾಳ, ಸಾಸಬಾಳ ಯತಿರಾಜ ಶಿಕ್ಷಣ ಸಂಸ್ಥೆಯ ಶೇಖರಗೌಡ ಪಾಟೀಲ, ನಾನಾಗೌಡ ಪಾಟೀಲ ಮತ್ತು ಅವರ ಕುಟುಂಬಸ್ಥರು ಹಾಗೂ ಶ್ರೀಮಠದ ಭಕ್ತರು ಅಭಿನವ ರುದ್ರಮುನಿ ಶಿವಾಚಾರ್ಯರಿಗೆ ತುಲಾಭಾರ ನೆರವೇರಿಸಿದರು.

