ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖ ನಾಗೇಶ ಗೋಲಶೆಟ್ಟಿ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತರ ಕರ್ನಾಟಕಕ್ಕೆ ನಿತ್ಯ ಅನ್ಯಾಯವಾಗುತ್ತಿದೆ, ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ಹೀಗಾಗಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಯ ಹೋರಾಟವನ್ನು ನಾವು ಇನ್ನಷ್ಟೂ ತೀವ್ರಗೊಳಿಸಲಿದ್ದೇವೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪ್ರಮುಖರಾದ ನಾಗೇಶ ಗೋಲಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಡು ವಿಭಜನೆ ಮಾಡುತ್ತಿಲ್ಲ, ಇದು ವಿಭಜನೆಯಲ್ಲ, ಕಳೆದ ಹಲವಾರು ವರ್ಷಗಳಿಂದ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಪ್ರಮಾಣದ ಅನ್ಯಾಯವಾಗುತ್ತಿದೆ, ಉತ್ತರ ಕರ್ನಾಟಕ ಭಾಗದಲ್ಲಿ ಹೇರಳವಾದ ಸಂಪನ್ಮೂಲಗಳಿದ್ದರೂ ಉ.ಕ. ಭಾಗದ ಜನತೆ ದೊಡ್ಡ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುವಂತಾಗಿದೆ, ರಾಜು ಕಾಗೆ ಸೇರಿದಂತೆ ಅನೇಕ ಶಾಸಕರು ಈ ನಿಲುವಿನ ಪರವಾಗಿದ್ದಾರೆ ಎಂದರು.
ಇತ್ತೀಚೆಗೆ ಪ್ರತ್ಯೇಕ ಮೈಸೂರು ರಾಜ್ಯ ರಚನೆಗೆ ಆ ಭಾಗದ ಹೋರಾಟಗಾರರು ಆಗ್ರಹಿಸಿದ್ದು ಉತ್ತರ ಕರ್ನಾಟಕ ಹೋರಾಟ ಸಮಿತಿಯು ಸ್ವಾಗತಿಸಿದೆ. ಕಾಗೆಯವರ ಪತ್ರಕ್ಕೆ ಈಗಾಗಲೇ ಆನೇಕ ಶಾಸಕರು ಬೆಂಬಲವನ್ನು ವ್ಯಕ್ತಪಡಿಸಿದ್ದು ಉತ್ತರ ಕರ್ನಾಟಕ ಭಾಗದ ಎಲ್ಲಾ ಜನಪ್ರತಿನಿಧಿಗಳು ಬೆಂಬಲಿಸಬೇಕಾಗಿದೆ. ಈ ಹಿಂದೆ ಸಂಸದರಾದ ರಮೇಶ ಜಿಗಜಿಣಗಿ ಅವರು ಗೌರವಾನ್ವಿತ ರಾಜ್ಯಪಾಲರಿಗೆ ಪ್ರತ್ಯೇಕ ರಾಜ್ಯ ಆಗ್ರಹಿಸಿ ಪತ್ರವನ್ನು ಬರೆದಿದ್ದಾರೆ. ಪಕ್ಷಾತೀತವಾಗಿ ಉತ್ತರ ಕರ್ನಾಟಕ ಭಾಗದ ಎಲ್ಲಾ ಜನಪ್ರತಿನಿಧಿಗಳು ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಹಾಗೂ ಲೋಕಸಭಾ ಸದಸ್ಯರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬೆಂಬಲಿಸಬೇಕಾಗಿದೆ.
ಉತ್ತರ ಕರ್ನಾಟಕದ ಜನತೆ ಏಕೀಕರಣಕ್ಕಾಗಿ ದೊಡ್ಡ ಹೋರಾಟ ಮಾಡಿದವರು, ಆದರೆ ಇಂದು ಅದೇ ಉತ್ತರ ಕರ್ನಾಟಕದ ಜನತೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ, ರಾಜ್ಯೋತ್ಸವ ಪ್ರಶಸ್ತಿಯಲ್ಲಿಯೂ ತಾರತಮ್ಯ, ಅಲ್ಲಿಯೂ ಉತ್ತರ ಕರ್ನಾಟಕದವರಿಗೆ ಅನ್ಯಾಯ ಇದೆ, ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ತಾರತಮ್ಯ, ಅನ್ಯಾಯ, ಮಲತಾಯಿ ಧೋರಣೆ ಮುಂದುವರೆದಿದೆ. ನಮ್ಮ ಯಾವ ಬೇಡಿಕೆಗಳನ್ನೂ ಯಾವ ಸರ್ಕಾರಗಳೂ ಈಡೇರಿಸಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾದ ದುಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷ್ಣೆ ಕಾವೇರಿಗಿಂತ ಮೂರು ಪಟ್ಟು ದೊಡ್ಡದಾಗಿರುವ ನದಿ, ಆದರೂ ಜೀವ ನದಿ ಕಾವೇರಿ, ಮಂಡ್ಯಗಿಂತ ಅಧಿಕ ಕಬ್ಬು ನಮ್ಮ ಭಾಗದಲ್ಲಿ ಬೆಳೆಯುತ್ತದೆ, ಆದರೂ ಸಹ ಮಂಡ್ಯ ಸಕ್ಕರೆ ಕಣಜ, ಕೇವಲ ಒಂದು ನಗರವನ್ನು ನಿರ್ಮಿಸಿದ ಕೆಂಪೆಗೌಡರನ್ನು ನಾಡಪ್ರಭು ಎಂದು ಕರೆಯಲಾಗಿದೆ, ಹಾಗಾದರೆ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸಂಗೊಳ್ಳಿ ರಾಯಣ್ಣ ಅವರನ್ನು ಏನೆಂದು ಕರೆಯುತ್ತೀರಿ? ಅವರು ಉತ್ತರ ಕರ್ನಾಟಕದವರು ಎಂದು ನಿರ್ಲಕ್ಷ್ಯ ತೋರುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಐ.ಟಿ.-ಬಿಟಿ ಇಲ್ಲ ಎಂದು ನೀವು ತಿಳಿದುಕೊಂಡಿರಬಹುದು, ಐಟಿ ಕ್ಷೇತ್ರ ನಮ್ಮಲ್ಲಿ ಇಲ್ಲದಿರಬಹುದು, ಆದರೆ ನೈಸರ್ಗಿಕವಾದ ಹೇರಳ ಸಂಪನ್ಮೂಲಗಳು ನಮ್ಮಲ್ಲಿವೆ ಎಂದರು.
ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲು ಐಟಿಬಿಟಿ ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪನೆಯಾಗಬೇಕು. ಈ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು, ಎಲ್ಲ ವರ್ಗದ ಜನರು ಸ್ವಾಭಿಮಾನ, ಸ್ವಾತಂತ್ರ್ಯ, ಸ್ವಾವಲಂಬನೆಯೊಂದಿಗೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅನಿವಾರ್ಯ ಎಂದರು.
2018 ರಿಂದ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಪ್ರತ್ಯೇಕ ರಾಜ್ಯಕ್ಕಾಗಿ ಲಿಖಿತ ಅಭಿಪ್ರಾಯ ಮತ್ತು ಸಹಿ ಸಂಗ್ರಹಣ ಅಭಿಯಾನವನ್ನು ಪ್ರಾರಂಭಿಸಿದ್ದು ಒಂದು ಕೋಟಿ ನಲವತ್ತು ಲಕ್ಷಕ್ಕೂ ಅಧಿಕ ಜನರ ಸಹಿ ಸಂಗ್ರಹ ಮಾಡಿದೆ. 2025 ನವೆಂಬರ್ ಒಂದರಿಂದ ಜನಪ್ರತಿನಿಧಿಗಳಿಂದ ಸಹಿ ಸಂಗ್ರಹ ಹಾಗೂ ಪತ್ರ ಚಳುವಳಿಯ ಅಭಿಯಾನವನ್ನು ಪ್ರಾರಂಭಿಸಿದ್ದು ಈಗಾಗಲೇ ಈ ಭಾಗದ ಅನೇಕ ಜನಪ್ರತಿನಿಧಿಗಳು ಇದನ್ನು ಬೆಂಬಲಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಪತ್ರವನ್ನು ಕೂಡ ಬರೆದಿದ್ದಾರೆ ಎಂದರು.
ಹೋರಾಟಗಾರ ಎಸ್.ವಿ. ಪಾಟೀಲ ಸಿಂದಗಿ ಮಾತನಾಡಿ, ಎಲ್ಲ ಅಧಿಕಾರ ಬೆಂಗಳೂರು ಕೇಂದ್ರಿಕೃತವಾಗಿವೆ, ಮಹಾರಾಷ್ಟ್ರದಲ್ಲಿ ನಾಗಪುರ, ಮುಂಬಯಿ ಎರಡು ರಾಜಧಾನಿಗಳಿವೆ, ಆದರೆ ನಮ್ಮಲ್ಲಿ ಎರಡು ರಾಜಧಾನಿಗಳಿದ್ದರೂ ಸಂಪೂರ್ಣ ಅಧಿಕಾರ ಕೇಂದ್ರಕೃತವಾಗಿದ್ದು ಬೆಂಗಳೂರಿಗೆ. ಬೆಂಗಳೂರಿಗೆ ಹೋಗಲು ಈ ಭಾಗದ ಜನತೆ ಕನಿಷ್ಠ 5000 ರೂ. ಬೇಕು, ಅಷ್ಟೊಂದು ಹಣ ಕೊಟ್ಟು ಈ ಭಾಗದ ಬಡಜನತೆ ರಾಜಧಾನಿಗೆ ಹೋಗಲು ಸಾಧ್ಯವೇ ಎಂದು ಅನೇಕ ಪ್ರಶ್ನೆಗಳನ್ನು ಕೇಳಿದರು.
ಹಳೇ ಮೈಸೂರು ಹಾಗೂ ನಮ್ಮನ್ನು ಹೋಲಿಕೆ ಮಾಡಿದರೆ ನಾವು ಅವರಿಗಿಂತ 40 ವರ್ಷ ಹಿಂದೆ ಇದ್ದೇವೆ, ಇದಕ್ಕೆಲ್ಲವೂ ನಮ್ಮ ಭಾಗಕ್ಕೆ ತೋರಿದ ಮಲತಾಯಿ ಧೋರಣೆಯೇ ಕಾರಣ ಎಂದು ಎಸ್.ವಿ.ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮುಖರಾದ ಪೀಟರ್ ಅಲೆಕ್ಸಾಂಡ್, ಅಪ್ಪಾಸಾಹೇಬ ಯರನಾಳ, ಚೆನ್ನು ಕಟ್ಟಿಮನಿ, ಶ್ರೀಶೈಲ ಮಳಜಿ, ಸಂಗನಗೌಡ ಪಾಟೀಲ, ಗೌರವ ಸಲಹೆಗಾರರು, ಅಪ್ಪಾಸಾಹೇಬ ಬುಗಡೆ, ಭಾಗ್ಯರಾಜ ಸೊನ್ನದ, ನಾರಾಯಣ ಕುಲಕರ್ಣಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆಳಗಾವಿಯಲ್ಲಿ ಸುವರ್ಣ ಸೌಧ ಎನ್ನುವುದು ಕೇವಲ ಪಕ್ಷಿಗಳ ಸೌಧವಾಗಿದೆ, ವಿಷಯ ಚರ್ಚೆ ನಾಮಕೆವಾಸ್ತೆಯಾಗುತ್ತಿದೆ, ನಾವು ಸಹಿಷ್ಣುಗಳು, ಇಲ್ಲಿಯವರೆಗೂ ಸಹಿಸಿಕೊಂಡಿದ್ದೇವೆ, ಎಷ್ಟು ದಿನ ಸಹಿಸಿಕೊಳ್ಳೋಣ ಎಂದರು.
ಸಚಿವ ಸ್ಥಾನ ಹಂಚಿಕೆಯಲ್ಲಿಯೂ ಈ ಭಾಗದ ಶಾಸಕರಿಗೆ ಅನ್ಯಾಯ, ಮೀನುಗಾರಿಕೆಯಂತಹ ಖಾತೆಗಳನ್ನು ಉತ್ತರ ಕರ್ನಾಟಕದ ಶಾಸಕರಿಗೆ ನೀಡಲಾಗುತ್ತಿದೆ, ಪ್ರಭಾವಿ ಸ್ಥಾನಗಳೆಲ್ಲವೂ ದಕ್ಷಿಣ ಕರ್ನಾಟಕದ ಪಾಲಿಗೆ ಸೀಮಿತವಾಗಿದೆ.”
– ಎಸ್.ವಿ.ಪಾಟೀಲ (ಸಿಂದಗಿ)
ಉಕ ಹೋರಾಟ ಸಮಿತಿ ಪ್ರಮುಖರು

