ಉದಯರಶ್ಮಿ ದಿನಪತ್ರಿಕೆ
ಚಡಚಣ: ನಮ್ಮ ಹೋರಾಟ ಯಾವುದೇ ಜಾತಿ–ಧರ್ಮದ ವಿರುದ್ದವಲ್ಲ; ಅನ್ಯಾಯವನ್ನು ಪೋಷಿಸುವ ರಾಜಕೀಯ ಹೀತಾಶಕ್ತಿಗಳ ವಿರುದ್ದ, ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಚಡಚಣ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ‘ಸಮಾನತಾವಾದಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮ ಸಮಾಜ ನಿರ್ಮಾಣಕ್ಕಾಗಿ ಪರ್ಯಾಯ ರಾಜಕಾರಣದ ಸಸಿ ನೆಡುತ್ತಿದ್ದೇವೆ. ಸತ್ಯ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದೊಂದಿಗೆ ಆರಂಭಿಸಿರುವ ನಮ್ಮ ಚಳವಳಿ ಮುಂದಿನ ಪೀಳಿಗೆಗೆ ಹೆಮ್ಮರವಾಗಿ ಬೆಳೆಯಲಿದೆ ಎಂಬ ವಿಶ್ವಾಸವಿದೆ. ಅನ್ಯಾಯ, ಅವ್ಯವಸ್ಥೆಯ ವಿರುದ್ಧ ದನಿ ಎತ್ತುವ ಸಾರ್ವಜನಿಕರನ್ನು ಒಗ್ಗೂಡಿಸುವ ಕೆಲಸ ಕೈಗೆತ್ತಿಕೊಂಡಿದ್ದೇವೆ, ಎಂದು ಹೇಳಿದರು.
ಡಾ. ಅಂಬೇಡ್ಕರ್, ಪೆರಿಯಾರ್, ಕಾನ್ಸಿರಾಮ್ ಬಿಟ್ಟರೆ ಭವ್ಯಭಾರತದ ಸಮಾನತೆಯ ಸಮಾಜ ನಿರ್ಮಿಸಲು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದ ಸುಮಾರು ೭೮ ವರ್ಷಗಳೂ ಗತಿಸಿದರು ರಾಜಕೀಯವಾಗಿ ಯಾರೂ ಮುಂದೆ ಬಂದಿಲ್ಲ ಹಾಗೂ ಮುಂದುವರಿದಿಲ್ಲ. ಇಂದಿನ ರಾಜಕಾರಣಿಗಳು ರಸ್ತೆ–ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತ. ಭ್ರಷ್ಟಾಚಾರವನ್ನು ಮುಂದುವರೆಸುತ್ತಾ ಅಧಿಕಾರಕ್ಕಾಗಿ ಓಡುವುದನ್ನು ಮಾತ್ರ ನೋಡುತ್ತಿದ್ದೇವೆ. ಆದರೆ ಸಮ ಸಮಾಜ ನಿರ್ಮಿಸುವ ದೃಷ್ಟಿಕೋನ ಕಾಣುತ್ತಿಲ್ಲ,” ಎಂದು ಟೀಕಿಸಿದರು.
ಪರ್ಯಾಯ ರಾಜಕಾರಣದ ಅವಶ್ಯಕತೆಯನ್ನು ಒತ್ತಿಹೇಳಿದ ಅವರು, ಯಾವುದೇ ಜಾತಿ–ವರ್ಗಕ್ಕೆ ಸೀಮಿತವಲ್ಲದ ಸಮ ಸಮಾಜವಾದದ ಪಕ್ಷವನ್ನು ನಿರ್ಮಿಸಲು ದೇಶದಾದ್ಯಂತ ಜನಪರ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿದ್ದೇವೆ. ರಾಜ್ಯದ ೧೬೯ ಮತಕ್ಷೇತ್ರಗಳಲ್ಲಿ ಕಾರ್ಯ ಮುಗಿಸಿ, ೧೭೦ನೇಯದು ಚಡಚಣ ತಾಲೂಕಾಗಿದೆ. ಇಲ್ಲಿ ಜನಪರ ಅಭಿಪ್ರಾಯಗಳನ್ನು ಆಲಿಸಿ ತಯಾರಿ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಹಾದೇವ ಬಸಸೋಡೆ ಅವರು, ಸಮ ಸಮಾಜದ ನಿಮ್ಮ ಕನಸು ಶ್ಲಾಘನೀಯ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಬರಬೇಕೆಂಬ ಆಶಯಗುರಿಗೆ, ಸಮ ಸಮಾಜವಾದದ ಪಕ್ಷವನ್ನು ನಿರ್ಮಿಸಲು ನಾವು ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದರು.
ಸಭೆಯಲ್ಲಿ ಇತ್ತೀಚೆಗೆ ವಿಜಯಪುರ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಕಾರ್ಯಕಾರಿಣಿಗೆ ಅವಿರೋಧವಾಗಿ ಆಯ್ಕೆಯಾದ ಚಡಚಣ ತಾಲೂಕಿನ ಯುವ ಪತ್ರಕರ್ತ ಶಿವಾನಂದ ಶಿವಶರಣ ಅವರನ್ನು ಪ್ರಗತಿಪರ ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ,ಪಂ ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಧರ್ಮಣ್ಣ ಬನಸೋಡೆ, ದಶರಥ ಬನಸೋಡೆ, ರುದ್ರೇಶ ಬನಸೋಡೆ, ದ್ಯಾಮಗೊಂಡ ಕಾಂಬಳೆ, ದೇವಾನಂದ ಸಿಂಗೆ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.

