ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಆರಾದ್ಯ ದೇವ ಶ್ರೀ ಮಲ್ಲಯ್ಯ ದೇವರ ಛಟ್ಟಿ ಜಾತ್ರೆಯು ನ ೨೪ ಹಾಗೂ ೨೫ ರಂದು ಜರುಗಲಿದ್ದು, ಈ ನಿಮಿತ್ಯ ಗ್ರಾಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ನ.೨೪ರ ಶುಭ ಸೋಮವಾರ ಬೆಳಿಗ್ಗೆ ೫ ಗಂಟೆಗೆ ಗ್ರಾಮದ ಹಲವು ಭಕ್ತರಿಂದ ಅಭಿಷೇಕ ವಿಶೇಷ ಪೂಜೆ ಶ್ರದ್ಧಾ, ಭಕ್ತಿಯಿಂದ ನೆರವೇರಲಿದೆ.
ಸಂಜೆ ೭ ಗಂಟೆಗೆ ಗ್ರಾಮದ ಸಂಪ್ರದಾಯದಂತೆ ದೇವಸ್ಥಾನದಲ್ಲಿನ ನಂದಿ ಕೋಲಿಗೆ ಚೆಂಡು ಹೂ ಕಟ್ಟುವ ಕಾರ್ಯಕ್ರಮ, ದೇವಸ್ಥಾನದ ಸುತ್ತ ಪಾಲಕಿ ಹಾಗೂ ನಂದಿ ಕೋಲುಗಳ ಪ್ರದಕ್ಷಿಣೆಯು ಸಮ್ಮಾಳ ವಾದ್ಯ ಮೇಳ, ನೆರೆದ ಭಕ್ತರ ಜಯಘೋಷಗಳೊಂದಿಗೆ ವಿಜ್ರಂಭಣೆಯಿಂದ ನೆರವೇರಲಿದೆ. ಬಳಿಕ ಸ್ಥಳೀಯ ಶ್ರೀ ಸಿದ್ಧಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಸಂಘದ ಕಲಾವಿದರಿಂದ ಶಿವ ಭಜನೆ ನಡೆಯಲಿದೆ.
ನ.೨೫ರ ಮಂಗಳವಾರ ಬೆಳಿಗಿನ ಜಾವ ಗ್ರಾಮದ ನಾನಾ ಭಕ್ತರು ಕೊಡಮಾಡಿದ ಅಕ್ಕಿ, ಬೇಳೆ, ಬೆಲ್ಲದ ಪೂಜೆ, ಎಲೆ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೭ ಗಂಟೆಗೆ ಊರ ಹೊರಗಿನ ಮಲ್ಲಯ್ಯ ದೇವರು ಹಾಗೂ ಊರ ಒಳಗಿನ ಮಲ್ಲಯ್ಯ ದೇವರ ಭೇಟಿ ಕಾರ್ಯಕ್ರಮ ಗ್ರಾಮದ ಸಂಪ್ರದಾಯದಂತೆ ವಿಶಿಷ್ಟವಾಗಿ ನಡೆಯಲಿದೆ. ಬಳಿಕ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ಮಲ್ಲಯ್ಯ ದೇವರ ಉತ್ಸವ ಮೂರ್ತಿ ಹೊತ್ತ ಪಾಲಕಿ ಹಾಗೂ ನಂದಿಕೋಲಿನ ಭವ್ಯ ಮೆರವಣಿಯು ವಾದ್ಯ ಮೇಳದೊಂದಿಗೆ ವಿಜ್ರಂಭಣೆಯಿಂದ ನೆರವೇರಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.

