ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಇಂಜನಿಯರಿಂಗ್ ಮಹಾವಿದ್ಯಾಲಯದಲ್ಲಿ ಇದೇ ದಿನಾಂಕ ೨೧ ರಿಂದ ಮೂರು ದಿನಗಳ ಕಾಲ ೪ನೇ ಕರ್ನಾಟಕ ರಾಜ್ಯ ಪೀಡಿಯಾಟ್ರಿಕ್ ಮತ್ತು ೩೯ನೇ ದಕ್ಷಿಣ ವಲಯ ಪೆಡಿಕಾನ್ ೨೦೨೫ ಸಮ್ಮೇಳನ ಆಯೋಜಿಸಲಾಗಿದೆ ಎಂದು ಐಎಪಿ ಅಧ್ಯಕ್ಷ ಡಾ.ಎಸ್.ವಿ. ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಕ್ಕಳ ಆರೋಗ್ಯ ವಿಷಯದಲ್ಲಿ ಅನೇಕ ಸಂಶೋಧನೆಗಳು ನಡೆಯುತ್ತಿವೆ, ಈ ಎಲ್ಲ ವಿಷಯಗಳ ಸಮಗ್ರ ಚಿಂತನ ಮಂಥನ ನಡೆಸುವ ನಿಟ್ಟಿನಲ್ಲಿ ಈ ಸಮಾವೇಶಗಳು ಮಹತ್ವ ಪಡೆದಿದ್ದು, ಈ ಸಮಾವೇಶಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ವಿಜಯಪುರ ಬಿಎಲ್‌ಡಿಇ ವೈದ್ಯಕೀಯ ವಿವಿ ಆತಿಥ್ಯದಲ್ಲಿ ವಿಜಯಪುರದಲ್ಲಿ ಮೊದಲ ಬಾರಿಗೆ ಈ ಸಮಾವೇಶ ನಡೆಯಲಿದ್ದು, ಡಾ.ಬಿದರಿ ಅವರ ಅಶ್ವಿನಿ ಇನ್ಸಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಐಎಪಿ ಕರ್ನಾಟಕ ಹಾಗೂ ಜಿಲ್ಲಾ ಘಟಕದ ಸಹಯೋಗದಲ್ಲಿ ಈ ಸಮಾವೇಶ ಆಯೋಜಿಸಲಾಗುತ್ತಿದೆ.
`ಪ್ರತಿ ಮಗುವಿಗಾಗಿ ಜ್ಞಾನ, ನವೀನತೆ ಮತ್ತು ಆರೈಕೆಯನ್ನು ಏಕೀಕರಿಸುವುದು’ ಎಂಬ ವಿಷಯಾಧಾರಿತ ಈ ಸಮ್ಮೇಳನದಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಖ್ಯಾತ ಶಿಶುರೋಗ ತಜ್ಞರು, ವೈದ್ಯಕೀಯ ಶಿಕ್ಷಕರು, ಸಂಶೋಧಕರು ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಉನ್ನತ ಮಟ್ಟದ ವೈಜ್ಞಾನಿಕ ಅಧಿವೇಶನಗಳು, ತಜ್ಞರ ಉಪನ್ಯಾಸಗಳು, ಕಾರ್ಯಾಗಾರಗಳು, ಸಮಾಲೋಚನಾ ಚರ್ಚೆಗಳು ಮತ್ತು ಮಕ್ಕಳ ಆರೈಕೆಯ ಹೊಸ ಸವಾಲುಗಳ ಕುರಿತ ಸಂಶೋಧನಾ ಪ್ರಸ್ತುತಿಗಳು ನಡೆಯಲಿದ್ದು, ವಿಶೇಷವಾಗಿ ಸೋಂಕು ರೋಗಗಳ ನಿವಾರಣೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಸಚಿವ ಡಾ.ಎಂ.ಬಿ. ಪಾಟೀಲ ಚಾಲನೆ ನೀಡಲಿದ್ದಾರೆ. ಸಿಐಎಪಿ ಪ್ರಧಾನ ಕಾರ್ಯದರ್ಶಿ ಡಾ.ಯೋಗೇಶ್ ಪಾರಿಖ್ ಸೇರಿದಂತೆ ಅನೇಕ ವೈದ್ಯಕೀಯ ಲೋಕದ ದಿಗ್ಗಜರು ಭಾಗವಹಿಸಲಿದ್ದಾರೆ ಎಂದರು.
ಚಿಕ್ಕಮಕ್ಕಳ ತಜ್ಞ ಡಾ.ಎಲ್.ಎಚ್. ಬಿದರಿ ಮಾತನಾಡಿ, ಮಕ್ಕಳ ಕೈಗೆ ಮೊಬೈಲ್ ಕೊಡಲೇಬೇಡಿ, ಆ ಅಭ್ಯಾಸ ಹಚ್ಚಲೇಬೇಡಿ, ಮಕ್ಕಳ ಸ್ಕಿçÃನ್ ಟೈಂ ಪ್ರಮಾಣ ಹೆಚ್ಚುತ್ತಿರುವುದು ಮಕ್ಕಳ ಆರೋಗ್ಯಕ್ಕೆ ಅಪಾಯ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿಗೆ ಮಗು ಊಟ ಮಾಡುತ್ತಿಲ್ಲ ಎಂದು ಮಗುವಿನ ಕೈಗೆ ಮೊಬೈಲ್ ಕೊಡುವ ಪರಿಪಾಠ ಬೆಳೆಸಲಾಗುತ್ತಿದೆ, ಹೀಗಾಗಿ ಮಗು ಮೊಬೈಲ್‌ಗೆ ಅಡಿಕ್ಷನ್ ಆಗಿ ಬಿಟ್ಟಿದೆ, ನಮ್ಮ ಕೆಲಸ ಸುಲಭವಾಗಲಿ ಎಂದು ಮೊಬೈಲ್ ಕೊಟ್ಟರೆ ಹೇಗೆ? ಸ್ಕಿçÃನ್ ಟೈಂ ಅತಿಯಾಗಿ ಇರಬಾರದು, ಆದರೆ ಇತ್ತೀಚಿಗೆ ಚಿಕ್ಕಮಕ್ಕಳು ಮೊಬೈಲ್ ನೋಡುವ ಟೈಂ ಹೆಚ್ಚುತ್ತಿದೆ ಎಂದರು.
ಡಾ.ಪರಿಕ್ಷೀತ್ ಕೋಟಿ, ಡಾ.ಸಿದ್ಧು ಚರಕಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

