ನೀತಿ ಆಯೋಗ ಯೋಜನೆಯ ಸಂಕಲ್ಪ ಸಪ್ತಾಹ ಸಮಾರೋಪದಲ್ಲಿ ಶಾಸಕ ನಾಡಗೌಡ ಕರೆ
ವಿಜಯಪುರ: ಕೇಂದ್ರ ಸರ್ಕಾರದ ನೀತಿ ಆಯೋಗದಂತೆ ಪ್ರತಿ ವಲಯದಲ್ಲೂ ಎಲ್ಲರ ಸಹಯೋಗದೊಂದಿಗೆ ಪ್ರಗತಿ ಸಾಧಿಸಬೇಕು. ಮುಂದಿನ ಎರಡು ವರ್ಷದ ಅವಧಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯ ವಲಯವನ್ನು ಸಂಘಟಿಸಿ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳುವ ಮೂಲಕ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ತೊಡೆದು ಹಾಕಿ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನ ಹೊಂದಲು ಎಲ್ಲಾ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದು ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಕರೆ ನೀಡಿದರು.
ನಗರದ ಶ್ರೀ ಸಂಗಮೇಶ್ವರ ಸಭಾ ಭವನದಲ್ಲಿ ಸೋಮವಾರ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕಾಡಳಿತ, ತಾಲೂಕು ಪಂಚಾಯತಿ ತಾಳಿಕೋಟಿ ಇವರ ಸಹಯೋಗದಲ್ಲಿ ನೀತಿ ಆಯೋಗ ತಾಲೂಕು ಮಹತ್ವಾಕಾಂಕ್ಷೆ ಯೋಜನೆಯ ಸಂಕಲ್ಪ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯ ಸ್ವಚ್ಛತೆ ಹಾಗೂ ಶಿಕ್ಷಣಕ್ಕೆ ಗ್ರಾಮ ಪಂಚಾಯತಿಗಳು ಆದ್ಯತೆ ನೀಡಿದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ಆಶ್ರಯ, ಆರಾಧನೆ ಹಾಗೂ ಉದ್ಯೋಗ ಈ ಮೂರು ವಲಯದಲ್ಲಿ ಪ್ರಗತಿ ಸಾಧಿಸಿ, ಸರ್ಕಾರ ಜಾರಿ ಮಾಡುವಂತಹ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು ಎಂದು ಹೇಳಿದರು.
ಜನರ ಜೀವನಕ್ಕೆ ಆಧಾರವಾಗುವಂತಹ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಅನುಷ್ಟಾನಗೊಳಿಸುವತ್ತ ಆದ್ಯತೆ ನೀಡುವುದರ ಮೂಲಕ ತಾಲೂಕನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ,ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಜಿಲ್ಲಾ ಪಂಚಾಯತ ಯೋಜನಾ ಮತ್ತು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ, ಸಂಗಮೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೆಚ್.ಎಸ್.ಪಾಟೀಲ ಸೇರಿದಂತೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ & ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ರಾಜಶೇಖರ ದೈವಾಡಿ ಸ್ವಾಗತಿಸಿದರು. ತಾಳಿಕೋಟಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಿ. ಧರಿಕಾರ ಸಂವಿಧಾನ ಪೀಠಿಕೆ ಪ್ರತಿಜ್ಞೆ ವಿಧಿ ಬೋಧಿಸಿದರು.