ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ದಿಗೆ ನಮ್ಮ ಸರಕಾರಿ ಪ್ರೌಢಶಾಲೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಶಿಕ್ಷಕರೊಂದಿಗೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಪಾಲಕರೂ ಸಹಕಾರ ನೀಡಬೇಕೆಂದು ಚಿಮ್ಮಡ ಹಾಗೂ ತೇರದಾಳ ಸರಕಾರಿ ಪ್ರೌಢಶಾಲೆಯ ಮುಖ್ಯೊಪಾದ್ಯಾಯೆ ಎಂ.ಎಸ್. ಜಿಟ್ಟಿ ಹೇಳಿದರು.
ಗ್ರಾಮದ ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಕ-ಶಿಕ್ಷಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ದಿಗಾಗಿ ವಿಶೇಷ ತರಗತಿ ನಡೆಸುವುದು, ಬೆಳಗಿನ ಜಾವ ಅಭ್ಯಾಸಕ್ಕಾಗಿ ಮಕ್ಕಳನ್ನು ಎಚ್ಚರಿಸುವುದು, ವಿಶೇಷ ಟಿಪ್ಪಣಿಗಳನ್ನು ಮಕ್ಕಳಿಗೆ ನೀಡುವುದು ಹಾಗೂ ಶೇ. ೧೦೦ ರಷ್ಟು ಮಕ್ಕಳ ಹಾಜರಾತಿ ಕಾಯ್ದುಕೊಳ್ಳುವ ಮೂಲಕ ವಿಶೇಷ ಮುತುವರ್ಜಿ ವಹಿಸಲಾಗುತ್ತಿದ್ದು ಈ ಬಾರಿ ಶೇ,೧೦೦ ಫಲಿತಾಂಶಕ್ಕಾಗಿ ಶೃಮಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್‌ಟಿ.ಇ ಕಾಯಿದೆ ಕುರಿತು ಶ್ರೀಮತಿ ಬಿ.ಡಿ. ಬಡಿಗೇರ, ಮಕ್ಕಳ ಹಕ್ಕು ಹಾಗೂ ನಿರ್ವಹಣಾ ನೀತಿ ಕುರಿತು ಶ್ರೀಮತಿ ಆರ್.ಎಚ್. ಕೋರಡ್ಡಿ, ಪ್ರೋತ್ಸಾಹದಾಯಕ ಯೋಜನೆಗಳ ಕುರಿತು ಎಂ.ಎಲ್. ಜಮಾದಾರ, ಪಾಲಕ, ಪೋಷಕರ ಜವಾಬ್ದಾರಿ ಕುರಿತು ಶ್ರೀಮತಿ ಜಿ.ಎಸ್. ಕುಲಕರ್ಣೀ, ಪಾಠ ಆಧರಿತ ಮೌಲ್ಯಾಂಕಣ ಶ್ರೀಮತಿ ವಿ.ಡಿ. ತುಬಾಕಿ, ಬಾಲ್ಯ ವಿವಾಹ ಕಾಯಿದೆ ಕುರಿತು ಜೆ.ಎಸ್. ಸನದಿ, ಪೋಕ್ಸೊ ಕಾಯಿದೆ ಕುರಿತು ಪಿ.ಬಿ. ಮುಧೋಳ ಮಾತನಾಡಿ, ಪೋಷಕರ ಮನಮುಟ್ಟುವಂತೆ ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ನೆರವೇರಿಸಿದರು, ಮುಖ್ಯ ಅಥಿತಿಗಳಾಗಿ ಪ್ರಕಾಶ ಪಾಟೀಲ, ಮಹಾದೇವ ಪಾಲಭಾವಿ, ಆನಂದ ಕವಟಿ, ಬಾಳೇಶ ಬ್ಯಾಕೋಡ ಸೇರಿದಂತೆ ನೂರಾರು ಜನ ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಯೂ,ಬಿ. ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂಧರ್ಭದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.

