ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಡಾ.ಅರವಿಂದಕುಮಾರ್ ಕೋಟಗೊಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆಗಾಗಿ ಅಗತ್ಯವಾದ ಜ್ಞಾನ ಮತ್ತು ಸಾಧನಗಳ ಅರಿವು ಇಂದಿನ ಬೋಧಕರಿಗೆ ಮತ್ತು ವಿದ್ಯಾರ್ಥಿಗಳು ಅವಶ್ಯಕವಾಗಿದೆ ಎಂದು ಬಿಎಲ್‌ಡಿಇ ಸಂಸ್ಥೆಯ ವಿ.ಪಿ ಡಾ. ಪಿ. ಜಿ. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅರವಿಂದಕುಮಾರ್ ಕೋಟಗೊಂಡ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಕಾಲೇಜಿನ ಸಂಸ್ಥೆಯ ನಾವೀನ್ಯತಾ ಪರಿಷತ್ತು (ಐಐಸಿ), ಸಂಶೋಧನೆ ಮತ್ತು ಅಭಿವೃದಿ ಕೋಶ, ಎಂಎಚ್‌ಆರ್‌ಡಿ ಇನ್ನೋವೇಶನ್ ಸೆಲ್ (ಭಾರತ ಸರ್ಕಾರ) ಸಹಯೋಗದಲ್ಲಿ ದಿನಾಂಕ ೧೭-೧೧-೨೦೨೫ ಸೋಮವಾರದಂದು ಜುರುಗಿದ “ನಿಮ್ಮ ಆಲೋಚನೆಗಳ ರಕ್ಷಣೆ: ಐಪಿಆರ್ (ಬೌದ್ಧಿಕ ಆಸ್ತಿ ಹಕ್ಕು) ಅವಲೋಕನ” ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ತೊಡಗಿರುವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚು ಮಹತ್ವದ್ದಾಗಿರುವ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಕುರಿತು ಸಮಗ್ರ ಅವಲೋಕನವನ್ನು ಒದಗಿಸಿದರು. ಪೇಟೆಂಟ್‌ಗಳು,ಕೃತಿಸ್ವಾಮ್ಯಗಳು (ಕಾಪಿರೈಟ್), ಟ್ರೇಡ್‌ಮಾರ್ಕ್ಗಳು, ಮತ್ತು ಔದ್ಯಮಿಕ ವಿನ್ಯಾಸಗಳು ಸೇರಿದಂತೆ ಐಪಿಆರ್‌ನ ವಿವಿಧ ಸ್ವರೂಪಗಳನ್ನು ವಿವರಿಸಿದರು ಮತ್ತು ಸೃಜನಾತ್ಮಕ ಹಾಗೂ ಮೂಲ ಕೃತಿಗಳನ್ನು ಸಂರಕ್ಷಿಸುವಲ್ಲಿ ಅವುಗಳ ಮಹತ್ವವನ್ನು ಅರಿಯುವುದು ಅವಶ್ಯಕ ಎಂದು ಹೇಳಿದರು.
ಶೈಕ್ಷಣಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಬೌದ್ಧಿಕ ಸ್ವತ್ತುಗಳನ್ನು ಭದ್ರಪಡಿಸುವ ಪ್ರಕ್ರಿಯೆ ಮತ್ತು ಪ್ರಯೋಜನಗಳನ್ನು ಬಗ್ಗೆ ಮಾಹಿತಿ ನೀಡಿದರು, “ನಾವೀನ್ಯತಾ ಸಂಸ್ಕೃತಿಯನ್ನು” ಬೆಳೆಸುವ ಗುರಿಯನ್ನು ಮತ್ತು ಐಪಿಆರ್ ಅನ್ನು ವೃತ್ತಿ ಅಭಿವೃದ್ಧಿ ಹಾಗೂ ಸಾಂಸ್ಥಿಕ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಿದರು.
ಈ ವೇಳೆಯಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ ಮಾತನಾಡಿದರು.
ಈ ಸಂದರ್ಭದಲ್ಲಿ ಉಪ ಪ್ರಾಚಾರ್ಯ ಡಾ. ಅನೀಲ.ಭೀ.ನಾಯಕ, ಐಕ್ಯೂಎಸಿ ನಿರ್ದೆಶಕ ಡಾ.ಪಿ.ಎಸ್.ಪಾಟೀಲ, ಐಪಿಆರ್ & ಐಐಸಿ ಸಂಯೋಜಕಿ, ಪ್ರೊ. ಮಾಲತಿ ಚನಗೊಂಡ ಸಮನ್ವಯಾಧಿಕಾರಿ, ಸಂಚಾಲಕ ಡಾ.ಅನಿಲ್‌ಕುಮಾರ್ ಪಾಟೀಲ್, ಆರ್ & ಡಿ ಕೋಶದ ಸಮನ್ವಯಾಧಿಕಾರಿ ಡಾ. ಕೆ. ಮಹೇಶ್ ಕುಮಾರ್ ಸೇರಿದಂತೆ ಇನ್ನಿತರ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೆತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

