ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಂಗಳೂರಿನ ಕೆ.ಸಿ.ಟಿ.ಯು ಹಾಗೂ ಬೆಂಗಳೂರಿನ ವಿ ಕೇರ್ ಸೊಸೈಟಿ ಇವರ ಸಹಯೋಗದಲ್ಲಿ ಎಂ.ಎಸ್. ಎಂ.ಇ. ಇವರ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿಯಲ್ಲಿ ಇನಕ್ಯೂಬೆಶನ್ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸಿಕ್ಯಾಬ್ ಇನ್ ಸ್ಟಿಟ್ಯೂಟ್ ಆಫ್ ಇಂಜನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸಿಡಾಕ್‌ನ ಜಂಟಿ ನಿರ್ದೇಶಕರಾದ ಸುಪ್ರಿತಾ ಬಳ್ಳಾರಿ ಮಾತನಾಡಿ, ಇಂಜಿನಿಯರಿಂಗ್ ಪದವಿಯ ನಂತರ ಸ್ವಂತ ಉದ್ಯಮ ಸ್ಥಾಪಿಸಲು ಪಡೆಯಬೇಕಾದ ಅಗತ್ಯ ವೃತ್ತಿ ನೈಪುಣ್ಯತೆ ತರಬೇತಿ ಮತ್ತು ಕೈಗಾರಿಕೆಗಳನ್ನು ಸ್ಥಾಪಿಸಲು ತೆಗೆದುಕೊಳ್ಳುವ ಕ್ರಮಗಳ ಕುರಿತಾಗಿ ವಿಸ್ತೃತವಾಗಿ ವಿವರಿಸಿದರು. ಸ್ವ ಉದ್ಯೋಗ ಸ್ಥಾಪಿಸುವ ಮೂಲಕ ತಾವು ಉದ್ಯೋಗಿಯಾಗುವುದಲದೇ ಇತರರಿಗೂ ಉದ್ಯೋಗ ನೀಡಲು ವಿಫುಲ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ಆರ್ಥಿಕ ಸಾಕ್ಷರತಾ ಆಪ್ತ ಸಮಾಲೋಚಕರಾದ ಈರಣ್ಣ ಚಿಮ್ಮಲಗಿ ಅವರು ಸ್ವುದ್ಯೋಗ ಕೈಗೊಳ್ಳಲು ಬ್ಯಾಂಕಿನ ಮೂಲಕ ದೊರೆಯುವ ಸಾಲ ಸೌಲಭ್ಯ ಅನುಷ್ಠಾನಗೊಳಿಸುವ ಸರ್ಕಾರದ ಯೋಜನೆಗಳಾದ ಪಿ.ಎಂ.ಇ.ಜಿ.ಪಿ. ಯೋಜನೆ, ಮುದ್ರಾ ಯೋಜನೆ ಹಾಗೂ ಸ್ಟ್ಯಾಂಡ್ ಅಫ್ ಯೋಜನೆ ಬಗ್ಗೆ ಅವರು ವಿವರಿಸಿದರು.
ಸಿಕ್ಯಾಬ್ ಇನಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಸಚಿನ ಪಾಂಡೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಂಗಾಧರ ದೇಸಾಯಿ ಅವರು ಪ್ರಾಸ್ತಾವಕವಾಗಿ ಮಾತನಾಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕರಾದ ಸಂತೋಷ ಸಜ್ಜನ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

