ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಿ-ಅಂಶ ತುಂಬಾ ಮಹತ್ವ ಪಡೆದುಕೊಂಡಿವೆ.ಇದನ್ನು ಅರಿತುಕೊಂಡು ಜಾಗರೂಕತೆಯಿಂದ ಬಳಸಿಕೊಂಡರೆ ಬದುಕು ಯಶಸ್ವಿಯಾಗುತ್ತದೆಯೆಂದು ಪ್ರೊ.ಪಿ.ಎಲ್.ಹಿರೇಮಠ ಹೇಳಿದರು.
ಪಟ್ಟಣದ ಬಿ.ಎಲ್.ಡಿ.ಇ. ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ.ಹಾಗೂ ಸಂಖ್ಯಾಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರದ ಸಂಖ್ಯಾಶಾಸ್ತ್ರ ಸೇವೆಗಳಲ್ಲಿನ ವೃತ್ತಿ ಅವಕಾಶಗಳು ಎಂಬ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರವು ಸ್ಪರ್ಧೆಯಿಂದ ಕೂಡಿಕೊಂಡಿದೆ. ನಾವು ಸತತ ಪ್ರಯತ್ನ ಹಾಗೂ ನಿರಂತರವಾದ ಪರಿಶ್ರಮದಿಂದ ಮುನ್ನಡೆದರೆ ಸ್ಪರ್ಧೆಯಲ್ಲಿ ಮುಂದೆ ಬರಲು ಸಾಧ್ಯವಿದೆಯೆಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಪ್ರೊ.ಎನ್.ಎಸ್.ಪಾಟೀಲ ಮಾತನಾಡಿ, ಮಾನವನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಅಂಕಿ ಅಂಶಗಳೇ ಮುಖ್ಯವಾಗಿವೆ.ಸರ್ಕಾರದ ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಯೋಜನೆಗಳ ರೂಪುರೇಷೆಗಳಿಂದ ಹಿಡಿದು ಆರ್ಥಿಕ ಅಭಿವೃದ್ಧಿಯ ವಿಶ್ಲೇಷಣೆಯವರೆಗೆ ಅಂಕಿ ಸಂಖ್ಯೆಗಳ ಪ್ರಭುತ್ವ ಮರೆಯುವಂತಿಲ್ಲ. ಸರ್ಕಾರದ ಸಂಖ್ಯಾಶಾಸ್ತ್ರ ಇಲಾಖೆಯಲ್ಲಿರುವ ತಾಲೂಕು ಮತ್ತು ಜಿಲ್ಲೆಗಳಿಗೆ ಸಂಬಂಧಿಸಿದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳ ಅವಕಾಶಗಳು ದೊರಕಿಸಿಕೊಳ್ಳುವುದರ ಕುರಿತು ಮಾಹಿತಿ ನೀಡಿದರು.
ಸಂಖ್ಯಾಶಾಸ್ತ್ರದ ಉಪನ್ಯಾಸಕ ಪಿ.ಎಸ್.ಹೊರಕೇರಿ ಅವರು ಸಂಖ್ಯಾಶಾಸ್ತ್ರದ ಮಹತ್ವ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ವೇದಿಕೆಯಲ್ಲಿ ಆಯ್.ಕ್ಯೂ.ಎ.ಸಿ.ಯ ಸಂಯೋಜಕ ಸಿ.ಪಿ.ಧಡೇಕರ ಇದ್ದರು. ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು. ಠಾಕಾದೇವಿ ಲಮಾಣಿ ಪ್ರಾರ್ಥಿಸಿದಳು. ಆರ್.ಎಮ್.ಮುಜಾವರ ನಿರೂಪಿಸಿದರು. ಪಿ.ಎಸ್.ನಾಟಿಕಾರ ವಂದಿಸಿದರು.

