ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು. ದೇಶದ ಭವಿಷ್ಯಕ್ಕೆ ಮಕ್ಕಳೇ ಅಡಿಪಾಯ ಎಂದು ಬಲವಾಗಿ ನಂಬಿದ್ದರು. ಮಕ್ಕಳ ಹಕ್ಕುಗಳು, ಅವರ ಸುರಕ್ಷತೆ ಮತ್ತು ಉಜ್ವಲ ಭವಿಷ್ಯಕ್ಕಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಈ ದಿನ ನಮಗೆ ನೆನಪಿಸುತ್ತದೆ. ಮಕ್ಕಳ ಸಂತೋಷ ಮತ್ತು ಅವರ ಉತ್ತಮ ಬೆಳವಣಿಗೆಯಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದರು.
ತಾಲೂಕಿನ ಕನ್ನೊಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ದಿನಾಚರಣೆ ನಿಮಿತ್ಯವಾಗಿ ಶಿಕ್ಷಕರ-ಪೋಷಕರ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಕರು-ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಗಟ್ಟಿಯಾಗಿ ಓದಿಸಬೇಕು. ಉತ್ತಮ ಕಲಿಕಾ ಪ್ರಗತಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿ ಇರಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಪಾಠ ಆಧಾರಿತ ಮೌಲ್ಯಮಾಪನ, ವಿಶ್ಲೇಷಣೆ ಸೇರಿದಂತೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿಷೇಧ ನೀತಿ ಒಳಗೊಂಡಂತೆ ವಿವಿಧ ಯೋಜನೆಗಳ ಕುರಿತಾಗಿ ಮಾಹಿತಿಯನ್ನು ಪಾಲಕರು ತಿಳಿದುಕೊಳ್ಳಬೇಕು ಎಂದರು.
ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ನಾನಗೌಡ ಬಿರಾದಾರ, ಸಿಆರ್‌ಪಿ ಸೋಮೇಶ ಪಾಟೀಲ. ಸಿ.ಒ ಕಪ್ಪನಿಂಬರಗಿ. ರೈತ ಮುಖಂಡ ದಶರಥಸಿಂಗ ರಜಪೂತ. ಶಿಕ್ಷಕ ಸಂಪತ್ತಕುಮಾರ ಪಾಟೀಲ ಮಾತನಾಡಿದರು. ಮುಖ್ಯಗುರುಮಾತೆ ಸಿದ್ದಮ್ಮ ಕುಂಬಾರ, ಪಿ.ಆರ್.ಕೊಣ್ಣೂರ, ಅಶ್ವಿನಿ ಪೂಜಾರ ಸೇರಿದಂತೆ ಪಾಲಕರು ಹಾಗೂ ಮಕ್ಕಳು ಇದ್ದರು.

