ಉದಯರಶ್ಮಿ ದಿನಪತ್ರಿಕೆ
ಚಡಚಣ :“ಮಕ್ಕಳು ದೇವರ ಪ್ರತಿರೂಪ. ಸುಳ್ಳು–ಮೋಸಗಳ ಅರಿವು ಇಲ್ಲದ ಶುದ್ಧ ಜೀವಿಗಳು. ಅವರ ಶಿಕ್ಷಣ ಹಕ್ಕು ಹಾಗೂ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಹೋರಾಡಬೇಕು,” ಎಂದು ಶಿಕ್ಷಕ ಬಸವರಾಜ ಕರಜಗಿ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೨, ಮರಡಿಯಲ್ಲಿ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ಮಕ್ಕಳ ದಿನಾಚರಣೆ ಹಾಗೂ ಪೋಷಕ–ಶಿಕ್ಷಕರ ಮಹಾಸಭೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. “ಇಂದಿನ ಮಕ್ಕಳೇ ಭವ್ಯ ಭಾರತದ ನಾಳೆಯ ಪ್ರಜೆಗಳು. ಉತ್ತಮ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ನೀಡುವುದು ಪೋಷಕರ ಕರ್ತವ್ಯ,” ಎಂದು ತಿಳಿಸಿದರು.
ಶಿಕ್ಷಕ ಡಿ.ಎಸ್. ಬಗಲಿ ಮಾತನಾಡಿ, “ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ರಾಗಿಮಾಲ್ಟ್ ಹಾಗೂ ಕೇನೆ ಭರಿತ ಹಾಲು, ಪಠ್ಯಪುಸ್ತಕ, ಸಮವಸ್ತ್ರ ,ಶೂ–ಸಾಕ್ಸ್, ವಿದ್ಯಾರ್ಥಿವೇತನ ಮೊದಲಾದ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಕ್ಕಳು ಭವಿಷ್ಯ ರೂಪಿಸಿಕೊಳ್ಳಬೇಕು,” ಎಂದು ಸಲಹೆ ನೀಡಿದರು.
ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಮಕ್ಕಳ ಗುಣಾತ್ಮಕ ಕಲಿಕೆಗಾಗಿ ಸರ್ಕಾರದ ಯೋಜನೆಗಳಾದ ಓದು ಕರ್ನಾಟಕ, ಎಲ್‌ಬಿಎ, ಎಫ್‌ಎಲ್‌ಎನ್,ಅರ್ಧವಾರ್ಷಿಕ–ವಾರ್ಷಿಕ ಮೌಲ್ಯಮಾಪನ, ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ ಇವುಗಳ ಮೂಲಕ ಸರ್ಕಾರ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತಿದೆ. ಪೋಷಕರು ಮಕ್ಕಳ ಅಧ್ಯಯನಕ್ಕೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕ ಮಹಾದೇವ ಐಹೊಳ್ಳಿ ಸ್ವಾಗತ ಹಾಗೂ ನಿರೂಪಣೆ ನಿರ್ವಹಿಸಿದರು. ಶಿಕ್ಷಕಿ ವಿ.ಎಸ್. ಪತ್ತಾರ ವಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಬಾಲಾಜಿ ಗಾಡಿವಡ್ಡರ ವಹಿಸಿದ್ದರು. ಉಪಾಧ್ಯಕ್ಷೆ ಮಹಾದೇವಿ ಕೇಶೆಟ್ಟಿ, ಸರ್ವಸದಸ್ಯರು, ಮುಖ್ಯ ಶಿಕ್ಷಕ ಮಹಾಂತೇಶ ಉಮರಾಣಿ, ನಿವೃತ್ತ ಶಿಕ್ಷಕಿ ರೇಣುಕಾ ಗೌರ, ಪೋಷಕರು, ತಾಯಂದಿರು, ಶಿಕ್ಷಕರು, ಅಡುಗೆ ಸಹೋದರಿಯರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

