ಕೃಷ್ಣಾ ಮೇಲ್ದಂಡೆ ಯೋಜನೆ | ೧೪ದಿನ ಚಾಲು, ೧೦ದಿನ ಬಂದ್ ಪದ್ದತಿ ಅನುಸರಿಸಿ ನೀರು
ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೫-೨೬ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆಗಳಿಗೆ ೧೪ದಿನ ಚಾಲು, ೧೦ದಿನ ಬಂದ್ ಪದ್ದತಿ ಅನುಸರಿಸಿ ೨೦೨೬ ಏ.೩ರವರೆಗೆ ಕಾಲುವೆಗಳ ಮೂಲಕ ರೈತರ ಜಮೀನಿಗೆ ನೀರು ಹರಿಸಲು ತೀರ್ಮಾನಿಸಲಾಯಿತು. ನೀರಾವರಿ ಸಲಹಾ ಸಮಿತಿ ನಿಯಮದಂತೆ ಸಭೆಯನ್ನು ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷತೆಯಲ್ಲಿ ದಿನಾಂಕ:೧೪.೧೧.೨೦೨೫ ರಂದು ಬೆಳಗ್ಗೆ ೧೧.೦೦ ಗಂಟೆಗೆ ಕೊಠಡಿ ಸಂಖ್ಯೆ :೩೧೭, ೩ನೇ ಮಹಡಿ ವಿಕಾಸ ಸೌಧ, ಬೆಂಗಳೂರು ಸಭಾಂಗಣದಲ್ಲಿ ಜರುಗಿಸಲು ತೀರ್ಮಾನಿಸಲಾಗಿತ್ತು.
ಕಾರಣಾಂತರದಿಂದ ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಇವರಿಗೆ ಖುದ್ದಾಗಿ ಸಭೆಗೆ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಅವರು ವಿಡಿಯೋ ಸಂವಾದದ ಮುಖಾಂತರ ಹಾಜರಾಗಿ ಸಭೆಯಲ್ಲಿ ಹಾಜರಿದ್ದ ಹಿರಿಯ ಸಚಿವರಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ದನಾಗಿರುತ್ತೇನೆ ಎಂದು ತಿಳಿಸಿ. ಸಭೆ ಜರುಗಿಸಲು ಅನುಮತಿ ನೀಡಿದರು.
ಈ ಹಿನ್ನೆಲೆಯಲ್ಲಿ ಹಾಜರಿದ್ದ ಸಚಿವರಲ್ಲಿ ಪ್ರಿಯಾಂಕ್ ಖರ್ಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ.ಬಿಟಿ ಸಚಿವರು ಹಾಗೂ ಶಾಸಕರು ಚಿತ್ತಾಪೂರ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಕೃಷ್ಣಾ ಮೇಲ್ದಂಡೆ ಯೋಜನೆಯ ೨೦೨೫-೨೬ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯನ್ನು ಜರುಗಿಸಿದರು. ಸಭೆಯಲ್ಲಿ ೧೪.೧೧.೨೦೨೫ ರಂದು ಆಲಮಟ್ಟಿ ಮತ್ತು ನಾರಾಯಣಪೂರ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ಲಭ್ಯವಿರುವ ೧೦೫.೪೬ + ೧೮.೫೫ ಒಟ್ಟು ೧೨೪.೦೧ ಟಿ.ಎಂ.ಸಿ. ಅಡಿ ಸಂಗ್ರಹವಿದೆ.
ಕಾಲುವೆ ಜಾಲದಲ್ಲಿ ದ್ವಿ-ಋತು ಬೆಳೆಗಳನ್ನು ಸಂರಕ್ಷಿಸಲು ಮಾತ್ರ ೧೬.೧೧.೨೦೨೫ ರಿಂದ ೨೧.೧೧.೨೦೨೫ ರವರೆಗೆ ನೀರನ್ನು ಹರಿಸಲು ತೀರ್ಮಾನಿಸಲಾಗಿದೆ. ೨೨.೧೧.೨೦೨೫ ರಿಂದ ೦೧.೧೨.೨೦೨೪ ರವರೆಗೆ ೧೦ ದಿನಗಳ ವರೆಗೆ ಕಾಲುವೆ ಜಾಲದಲ್ಲಿ ಬಂದ್ ಅನುಸರಿಸಲಾಗುವದು. ೦೨.೧೨.೨೦೨೫ ರಿಂದ ೦೩.೦೪.೨೦೨೬ ರವರೆಗೆ ಮುಖ್ಯ ಕಾಲುವೆಯಡಿ ೧೪ ದಿನ ಚಾಲೂ ಹಾಗೂ ೧೦ ದಿನ ಬಂದ್ ಪದ್ಧತಿಯನ್ನು ಅನುಸರಿಸಿ ಪ್ರತಿ ದಿನ ೧.೦೦ ಟಿ.ಎಂ.ಸಿ ಬಳಕೆಯಂತೆ ನೀರಾವರಿಗೆ ಲಭ್ಯವಿರುವ ೭೩.೦೦ ಟಿ.ಎಂ.ಸಿ. ನೀರನ್ನು ಹರಿಸಲು ತಿರ್ಮಾನಿಸಲಾಗಿದೆ.
೦೧.೧೨.೨೦೨೫ ರಿಂದ ೩೦.೦೬.೨೦೨೬ ರವರೆಗೆ ಕುಡಿಯುವ ನೀರು, ಕೆರೆಗಳನ್ನು ತುಂಬುವುದು. ಕಾಲುವೆಗಳ ಮುಖಾಂತರ ಕುಡಿಯುವ ನೀರಿನ ಯೋಜನೆಗಳಿಗೆ ನೀರು ಪೂರೈಸುವುದು. ಭಾಷ್ಟ್ರೀಕರಣ. ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹಾಗೂ ಕೈಗಾರಿಕೆಗಳಿಗೆ, ಬ್ಯಾರೇಜ್ ಗಳಲ್ಲಿ ನೀರಿನ ಸಂಗ್ರಹಣೆ, ರೈತರ ಹಿನ್ನೀರಿನ ಬಳಕೆ ಇತ್ಯಾದಿ ಸೇರಿದಂತೆ ಸಭೆಯಲ್ಲಿ ಚರ್ಚಿಸಿ ಅಂದಾಜು ೪೫.೦೦ ಟಿ.ಎಂ.ಸಿ. ನೀರನ್ನು ಕಾಯ್ದಿರಿಸಿ ನಿರ್ಣಯಿಸಲಾಯಿತು.
ಈ ವರ್ಷ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವದರಿಂದ ನವ್ಹಂಬರ್ ೧೪ರವರೆಗೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮುಂದುವರೆದಿದೆ.
ಇದರಿಂದ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೂ ಆಲಮಟ್ಟಿಯ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ.
ಶಾಸ್ತ್ರಿ ಜಲಾಶಯಕ್ಕೆ ಮೇ ೧೯ ರಿಂದ ಒಳಹರಿವು ಆರಂಭಗೊಂಡಿದ್ದು ೨೦೨೫ರ ಅಕ್ಟೋಬರ್ ಅಂತ್ಯದವರೆಗೂ ಒಳಹರಿವು ಇದೆ.
ಇಲ್ಲಿಯವರೆಗೆ ಸುಮಾರು ೮೦೦ ಟಿಎಂಸಿ ಅಡಿಗಿಂತಲೂ ಅಧಿಕ ನೀರು ಜಲಾಶಯಕ್ಕೆ ಹರಿದುಬಂದಿದ್ದು, ಜಲಾಶಯದಿಂದ ನದಿ ಪಾತ್ರಕ್ಕೆ ಸುಮಾರು ೭೦೨ ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿ ಪಾತ್ರಕ್ಕೆ ಹರಿದು ಹೋಗಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದುಬಂದಿದೆ.
ಲಾಲಬಹಾದ್ದೂರ ಶಾಸ್ತ್ರಿ ಸಾಗರ ಮತ್ತು ಬಸವಸಾಗರಗಳಿಂದ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟ ಜಿಲ್ಲೆಯ ಜನತೆಯ ದಾಹ ನೀಗಿಸಲಿವೆ.
ಉತ್ತರ ಕರ್ನಾಟಕ ಜೀವನಾಡಿಯಾಗಿರುವ ಕೃಷ್ಣಾ ಕಣಿವೆಯು ರಾಜ್ಯದ ಒಟ್ಟು ನೀರಾವರಿ ಕ್ಷೇತ್ರದಲ್ಲಿ ಶೇ.೬೨ರಷ್ಟು ಭೂಮಿಗೆ ನೀರು ಒದಗಿಸಲಿದೆ.
ಜೀವ ಜಲ ಅತೀ ಅಮೂಲ್ಯ ಪೋಲು ಮಾಡಬೇಡಿ, ಜಾಗೃತಿಯಾಗಿ ಬಳಕೆ ಮಾಡಿ
ಎಲ್ಲಾ ರೈತ ಬಾಂಧವರು ನೀರನ್ನು ಹಿತವಾಗಿ-ಮಿತವಾಗಿ ಬಳಸಲು ವಿನಂತಿಸಿದ್ದಾರೆ.

