ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ಪ್ರಕರಣ | ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು-ಸುವ್ಯವಸ್ಥೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ರಾಜಾತಿಥ್ಯ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಅಮಾಯಕ ಜನರ ಪ್ರಾಣ ತೆಗೆದ ಮಾನವೀಯತೆಯ ವಿರೋಧಿಗಳಾದ ಭಯೋತ್ಪಾದಕರಿಗೆ ಜೈಲಿನಲ್ಲಿ ರಾಜಾತೀಥ್ಯ ನೀಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಭಯೋತ್ಪಾದನ ಚಟುವಟಿಕೆಗಳಲ್ಲಿ ಭಾಗಿಯಾದ ಉಗ್ರರಿಗೆ ಜೈಲಲ್ಲಿ ರಾಜಾತಿಥ್ಯ ನೀಡುವುದರಿಂದ ಇನ್ನೊಬ್ಬ ಉಗ್ರ ತಯಾರಾಗಲು ಪ್ರಚೋದನೆ ನೀಡಿದಂತಾಗುತ್ತದೆ, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜೈಲಿನಲ್ಲಿ ಉಗ್ರರಿಗೂ ರಾಜಾತೀಥ್ಯ ದೊರಕುವ ಮಟ್ಟಿಗೆ ವ್ಯವಸ್ಥೆ ಹಾಳಾಗಿದೆ, ಕೂಡಲೇ ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಪಟ್ಟಣಶೆಟ್ಟಿ ಒತ್ತಾಯಿಸಿದರು.
ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಗಂಭೀರ ಆರೋಪ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ರಾಜಾರೋಷವಾಗಿ ಮೊಬೈಲ್ ಬಳಕೆ ಹಾಗೂ ವಿಲಾಸಿ ಜೀವನದಲ್ಲಿ ತೊಡಗಿದ್ದಾರೆ, ಐಸಿಸ್ ಸಂಘಟನೆಯ ಸದಸ್ಯರು ಐಷಾರಾಮಿಯಾಗಿ ಎಲ್ಲ ಸವಲತ್ತುಗಳನ್ನು ಉಪಯೋಗಿಸುತ್ತಿರುವುದನ್ನು ನೋಡಿದರೆ ರಾಜ್ಯ ಸರ್ಕಾರ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತೋರುತ್ತದೆ ಎಂದರು.
ಉಗ್ರರಿಗೆ ಈ ರೀತಿಯಾಗಿ ಐಷಾರಾಮಿ ಸವಲತ್ತುಗಳನ್ನು ನೀಡುವುದರಿಂದ ಮತ್ತೊಬ್ಬ ಉಗ್ರ ಜನ್ಮತಾಳಲು ಹೆದರುವುದಿಲ್ಲ. ಎಷ್ಟೊ ವರ್ಷಗಳಿಂದ ತಲೆಮರಿಸಿಕೊಂಡಿದ್ದ ಉಗ್ರ ವಿಜಯಪುರದಲ್ಲಿ ಅರೆಸ್ಟ್ ಆಗುತ್ತಾನೆ. ವಿಜಯಪುರದಲ್ಲಿಯೇ 20 ವರ್ಷಗಳಿಂದ ವಾಸವಿದ್ದು ಇಲ್ಲಿಯೇ ಅನೇಕ ದಾಖಲೆಗಳನ್ನು ಸಹ ಮಾಡಿಕೊಂಡಿದ್ದಾರೆ, ಒಂದು ರೀತಿಯ ಈ ಎಲ್ಲ ಉದಾಹರಣೆಗಳನ್ನು ಅವಲೋಕಿಸಿದರೆ ಕರ್ನಾಟಕ ಉಗ್ರರ ಪಾಲಿಗೆ ಅಡಗುತಾಣ ಹಾಗೂ ಜೈಲು ಸುರಕ್ಷಿತ ತಾಣವಾಗಿದೆ ಎಂದು ತೋರುತ್ತದೆ ಎಂದರು.
ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪ್ರತಿಯೊಂದರಲ್ಲಿಯೂ ನಿರ್ಲಕ್ಷö್ಯತನ ಮಾಡುತ್ತಲೇ ಇದೆ, ರೈತರ ವಿಷಯದಲ್ಲಿಯೂ ಈ ಸರ್ಕಾರ ಬೇಜವಾಬ್ದಾರಿ ಪ್ರದರ್ಶಿಸಿದೆ, ಗಾಂಜಾ, ಅಫೀಮು ಮಾದಕ ದ್ರವ್ಯ ರಾಜ್ಯದಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ, ಈ ಬಗ್ಗೆಯೂ ಮುಖ್ಯಮಂತ್ರಿಗಳು ಗಮನ ಕೊಡದೇ ಕೇವಲ ಕುರ್ಚಿ ಉಳಿಸಿಕೊಳ್ಳುವಲ್ಲಿ ತೊಡಗಿದ್ದಾರೆ ಎಂದರು.
ನಮ್ಮ ದೇಶದ ಒಳಗಡೆ ಇರುವಷ್ಟು ಉಗ್ರರು ಪಾಕ್ ಗಡಿಯಲ್ಲೂ ಇಲ್ಲ. ನಮ್ಮ ದೇಶದಲ್ಲಿ ಆಂತರಿಕ ಭಯೋತ್ಪಾದಕರು ಹೆಚ್ಚಾಗಿದ್ದಾರೆ. ಇಲ್ಲಿನ ಯುವಕರ ಮೈಂಡ್ ಸೆಟ್ ಬದಲಾಯಿಸಿ ವ್ಯವಸ್ಥಿತವಾಗಿ ಅವರನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ ಅದನ್ನು ಮಟ್ಟ ಹಾಕಬೇಕು ಎಂದು ಪಟ್ಟಣಶೆಟ್ಟಿ ಒತ್ತಾಯಿಸಿದರು.
ಮುಗ್ದರನ್ನು ಈ ಚಟುವಟಿಕೆಗಾಗಿ ತಲೆತುಂಬಿ ತೊಡಗಿಸುವಂತಹ ಕೆಲಸ ದೇಶದಲ್ಲಿ ನಡೆಯುತ್ತಿದೆ. ವೈದ್ಯರ ಒಬ್ಬರ ಮನೆಯಲ್ಲಿ ಕೆಜಿಗಟ್ಟಲೇ ಸ್ಪೋಟಕ ವಸ್ತುಗಳು, ಶಸ್ರಾಸ್ತ್ರಗಳು ಸಿಕ್ಕಿರುವುದು ಆತಂಕಕಾರಿ ಸಂಗತಿ ಎಂದರು.

