ಪ್ರಕೃತಿ ವೈವಿಧ್ಯತೆ
ಲೇಖನ
– ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ: ೯೭೪೨//೪೧೬೦
ಉದಯರಶ್ಮಿ ದಿನಪತ್ರಿಕೆ
ಕರ್ನಾಟಕದ ಎರಡನೇ ಅತೀ ದೊಡ್ಡ ಜಲಪಾತವೆಂದು ಗೋಕಾಕ ಜಲಪಾತವನ್ನು ಕರೆಯಲಾಗುತ್ತದೆ. ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದಿಂದ ೬ ಕಿ.ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಇದು ಕೆನಡಾ ಮತ್ತು ಅಮೇರಿಕ ದೇಶದ ನಡುವೆ ಇರುವ ನಯಾಗರ ಜಲಪಾತದಂತೆ ಕಾಣಿಸುವುದರಿಂದ ಇದನ್ನು ಭಾರತದ ನಯಾಗರವೆಂದು ಕರೆಯುತ್ತಾರೆ.
ಸುಮಾರು ೧೮೦ ಅಡಿ ಎತ್ತರದಿಂದ ಧುಮುಕುವ ನೀರು ಇಲ್ಲಿ ರಮಣೀಯವಾಗಿ ಕಾಣುತ್ತದೆ. ಮಳೆಗಾಲದ ಜೂನ್ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೂ ಈ ಜಲಪಾತದಲ್ಲಿ ಹೇರಳ ನೀರಿರುವುದರಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿ ಕೆಂಪು ಬಣ್ಣದ ನೀರಿನೊಂದಿಗೆ ಈ ಜಲಪಾತವು ಭೋರ್ಗರೆಯುತ್ತಾ ಧುಮುಕುತ್ತದೆ.
ತೂಗು ಸೇತುವೆ

ಗೋಕಾಕ ಫಾಲ್ಸ್ನ ಮತ್ತೊಂದು ವಿಶೇಷತೆ ಎಂದರೆ ಜಲಪಾತದ ನೀರು ಧುಮುಕುವ ಸ್ಥಳಕ್ಕೆ ಹೋಗಲು ಸಹಾಯ ಆಗುವಂತೆ ಬ್ರಿಟಿಷರ ಕಾಲದಲ್ಲಿ ಮರದ ಕಟ್ಟಿಗೆ (ಪಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಿದ ತೂಗು ಸೇತುವೆ. ಈ ಸೇತುವೆಯು ೨೦೧ ಮೀಟರ್ (೬೫೯ ಅಡಿ) ಉದ್ದದವಿದ್ದು, ೧೪ ಮೀಟರ್ (೪೬ ಅಡಿ) ಎತ್ತರವಿದೆ. ಜಲಪಾತವು ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆ ಮೇಲೆ ನಡೆದಾಡುವದೇ ಒಂದು ಅದ್ಭುತ ರೋಮಾಂಚನ ಮತ್ತು ತೂಗುಯ್ಯಾಲೆಯಲ್ಲಿ ನಡೆದಾಡುವಂತಹ ಅನುಭವ ನೀಡುತ್ತದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕ. ರಾಜ್ಯದಲ್ಲೇ ಅತಿದೊಡ್ಡ ತೂಗು ಸೇತುವೆ ಎನ್ನುವ ಹೆಗ್ಗಳಿಕೆ ಈ ತೂಗು ಸೇತುವೆಗಿದ್ದು, ಇದರ ಅದ್ಭುತ ಅನುಭವ ಪಡೆಯಬಹುದು.
ಈ ಜಲಪಾತದ ಕೆಳಗೆ ಒಂದು ವಿದ್ಯುತ್ ಉತ್ಪಾದನೆ ಘಟಕವಿದ್ದು, ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ ೧೮೮೫-೮೭ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಾಯಿತು. ಏಷ್ಯಾಖಂಡದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಲಾದ ವಿದ್ಯುತ್ ಉತ್ಪಾದನಾ ಘಟಕ ಇದು ಎನ್ನುವ ಇತಿಹಾಸವೂ ಇಲ್ಲಿಗಿದೆ. ಈ ಜಲಪಾತದ ವಿದ್ಯುತ್ನ್ನು ಗೋಕಾಕ ಫಾಲ್ಸ್ ಟೆಕ್ಸಟೈಲ್ಮಿಲ್, ಹೆಸ್ಕಾಂ ಸೇರಿದಂತೆ ಸ್ಥಳೀಯವಾಗಿ ನೆಲೆಸಿರುವ ವಿದ್ಯುತ್ ಉತ್ಪಾದನಾ ಘಟಕದ ಕಾರ್ಮಿಕರ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ.
೧೮೦ ಅಡಿ ಎತ್ತರದಿಂದ ಧುಮುಕುವ ನೀರು ಹಚ್ಚಹಸಿರಿನ ಪ್ರಕೃತಿಯ ನಡುವೆ ನದಿಯಾಗಿ ಹರಿಯುತ್ತದೆ. ಈ ಜಲಪಾತವನ್ನು ದೂರದಿಂದ ನೊಡಲು ‘ವೀಕ್ಷಣಾ ಸ್ಥಳ’ವನ್ನು ನಿರ್ಮಿಸಲಾಗಿದ್ದು, ಇಲ್ಲಿ ನಿಂತು ಜಲಪಾತದ ವಿಹಂಗಮ ನೋಟವನ್ನು ನೋಡಬಹುದು ಮತ್ತು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಳ್ಳಬಹುದು. ಪ್ರವಾಸಿಗರು ಜಲಪಾತದ ಬಳಿ ಒಂದೆರೆಡು ಗಂಟೆಗಳ ಕಾಲ ವೀಕ್ಷಣೆಯನ್ನು ಆನಂದಿಸಲು ಅವಕಾಶವಿದೆ.
ಗೋಕಾಕ್ ಜಲಪಾತದಿಂದ ಕೆಲವೇ ಕೆಲವು ಕಿ.ಮೀ ದೂರದಲ್ಲಿ ಗೊಡ್ಚಿನಮಲ್ಕಿ ಎಂಬ ಮತ್ತೊಂದು ಜಲಪಾತವಿದ್ದು, ಅಲ್ಲಿಗೂ ಭೇಟಿ ನೀಡಬಹುದು.
ಜಲಪಾತದ ಪಕ್ಕದಲ್ಲಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪ ಶೈಲಿಯ ಮಹಾಲಿಂಗೇಶ್ವರ ದೇವಸ್ಥಾನವಿದೆ.
ಜಲಪಾತಕ್ಕೆ ಇಳಿಯುವ ರಸ್ತೆಯ ಇನ್ನೊಂದು ಭಾಗದಲ್ಲಿ ಹತ್ತಿ ಬಟ್ಟೆ ತಯಾರಿಸುವ ಐತಿಹಾಸಿಕ ಕಾರ್ಖಾನೆಯೂ ಇದೆ. ಇಲ್ಲಿಂದ ಪ್ರವಾಸಿಗರು ಹತ್ತಿ ಬಟ್ಟೆಗಳನ್ನು ಖರೀದಿಸಬಹುದು.
ಈ ಜಲಪಾತವು ಬೆಂಗಳೂರಿನಿಂದ ೬೨೨ ಕಿ.ಮೀ, ಬೆಳಗಾವಿ ಪಟ್ಟಣದಿಂದ ೬೨ ಕಿ.ಮೀ. ದೂರದಲ್ಲಿದ್ದು, ಗೋಕಾಕ್ ಹೆದ್ದಾರಿಯ ಪಕ್ಕದಲ್ಲಿದೆ. ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆ ಬೇಕೆಂದರೆ ಆರು ಕಿ.ಮೀ. ದೂರದ ಗೋಕಾಕ್ ಪಟ್ಟಣಕ್ಕೆ ತೆರಳಬೇಕು.
ಈ ಜಲಪಾತದಿಂದ ಮೂರು ಕಿ.ಮೀ. ದೂರದಲ್ಲಿ ಯೋಗಿಕೊಳ್ಳಿ ಎಂಬ ಚಾರಣ ಪ್ರದೇಶ, ಎಂಟು ಕಿ.ಮೀ. ದೂರದಲ್ಲಿ ಮಾರ್ಕಂಡೇಯ ನದಿಯಲ್ಲಿ ಬೋಟಿಂಗ್ ವ್ಯವಸ್ಥೆಯಿದೆ. ಜಲಪಾತ ಧುಮುಕುವ ಸ್ಥಳಕ್ಕೆ ಪ್ರವಾಸಿಗರಿಗೆ ಹೋಗಲು ಮುಕ್ತ ಅವಕಾಶವಿದ್ದು, ಮಕ್ಕಳನ್ನು ಕರೆದುಕೊಂಡು ಹೋದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ವಾರಾಂತ್ಯದ ಅವಧಿಗಳಲ್ಲಿ ಇಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿರುತ್ತದೆ.


