ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಗುಣಮಟ್ಟದ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಕರ್ನಾಟಕ ಪಬ್ಲಿಕ್ ಶಾಲೆಗಳು ಒದಗಿಸುತ್ತವೆ. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ, ದಾಖಲಾತಿ ಹೆಚ್ಚಳ, ಒಂದೇ ಸೂರಿನಡಿ ಎಲ್.ಕೆ.ಜಿ ಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ವಿದ್ಯಾಭ್ಯಾಸ ನೀಡುವ ಮಹತ್ವಾಕಾಂಕ್ಷಿಯ ಕಾರ್ಯತಂತ್ರವೇ ಕೆಪಿಎಸ್ ಶಾಲೆಗಳದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಸಿಂದಗಿ ತಾಲೂಕಿನ ಯಂಕಂಚಿ ಮತ್ತು ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ಮತ್ತೆ ಹೊಸದಾಗಿ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದ ಆರ್.ಎಮ್.ಎಸ್.ಎ ಪ್ರೌಢಶಾಲೆ, ಬೊಮ್ಮನಹಳ್ಳಿ ಗ್ರಾಮದ ಆರ್.ಎಂ.ಎಸ್.ಎ ಪ್ರೌಢಶಾಲೆ ಮತ್ತು ಯರಗಲ್ ಬಿಕೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಅನುಮೋದನೆ ನೀಡುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಒಂದೇ ಆವರಣದಲ್ಲಿ ಎಲ್.ಕೆ.ಜಿ ಯಿಂದ ಪದವಿ ಪೂರ್ವದವರೆಗೆ ಶಿಕ್ಷಣವನ್ನು ಒದಗಿಸಲು ಅನುಕೂಲ ಮಾಡಿಕೊಟ್ಟಿದೆ. ಅಂದಾಜು ರೂ.೨-೪ಕೋಟಿ ರೂ. ಅನುದಾನವನ್ನು ಈ ಶಾಲೆಗಳಿಗೆ ಒದಗಿಸುವ ಮೂಲಕ ಅಗತ್ಯ ಮೂಲಭೂತ ಸೌಕರ್ಯ, ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ಹೊಂದಿದ ಶಿಕ್ಷಕರಿಂದ ಕೌಶಲ್ಯಭರಿತ ಶಿಕ್ಷಣ ಒದಗಿಸುವ ಮಹತ್ವದ ಯೋಜನೆ ಇದಾಗಿದೆ. ಒಂದೇ ಸೂರಿನಡಿ ಸುಮಾರು ೧೨೦೦ ಮಕ್ಕಳ ಕಲಿಕೆಗೆ ಕೆಪಿಎಸ್ ಶಾಲೆಗಳು ಅವಕಾಶ ಒದಗಿಸಿಕೊಡುತ್ತವೆ. ಇದರೊಂದಿಗೆ ದ್ವಿ ಭಾಷಾ ಕಲಿಕೆಗೂ ಅವಕಾಶವಿರುತ್ತದೆ. ಇಂತಹ ಪ್ರಮುಖ ಶಾಲೆಗಳನ್ನು ಈ ಭಾಗದ ಶಾಸಕರ ನಿರಂತರ ಪ್ರಯತ್ನದಿಂದ ಒದಗಿ ಬಂದಿವೆ ಎಂದು ತಿಳಿಸಿದ್ದಾರೆ.

“ಸಿಂದಗಿ ಮತಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ನಮ್ಮೆಲ್ಲರ ಶ್ರಮ ಮತ್ತು ಸರಕಾರದ ಬದ್ಧತೆಯ ಫಲವಾಗಿ ಈ ಯೋಜನೆಯ ಮೂಲಕ ನನ್ನ ಕ್ಷೇತ್ರದ ತಾಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಹೊಸ ದಾರಿ ತೆರೆಯಲಿದೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಲಿದೆ.”
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

