ಬರದ ಕರಿ ನೆರಳು | ನೀರಿಲ್ಲದೇ ಕಮರುತ್ತಿರುವ ಬೆಳೆ | ಬಾಡುತ್ತಿರುವ ಅನ್ನದಾತರ ಮುಖ
ಆಲಮಟ್ಟಿ: ವಿಜಯಪುರ ಜಿಲ್ಲೆಯಾದ್ಯಂತ ಪ್ರಸ್ತುತ ಭೀಕರ ಬರದ ಕರಿ ನೆರಳಿನ ಕಾರ್ಮೋಡ ಆವರಿಸಿದ್ದು ಅನ್ನದಾತರು ತತ್ತರಗೊಂಡಿದ್ದಾರೆ. ಆಶಾಭಾವದಿಂದ ಭೂಮಿಯಲ್ಲಿ ಬಿತ್ತಿದ್ದ ಬೆಳೆಗಳು ನೀರಿಲ್ಲದೇ ಸೊರಗಿ ಕಮರಿ ಬೆಂಡಾಗುತ್ತಿವೆ. ಮೆಲ್ಲಗೆ ನಿತ್ರಾಣಾವಸ್ಥೆಯಲ್ಲಿ ನರಳಾಡಿ ಬಾಗಿ ಬಾಡುತ್ತಿವೆ. ಬೆಳೆಗಳ ಈ ದಯನೀಯ ಸ್ಥಿತಿಯನ್ನು ಕಣ್ಣಾರೆ ಕಂಡು ರೈತರ ಮೊಗಗಳು ಕಳಾಹೀನಗೊಂಡಿವೆ. ಕೂಡಲೇ ಸರ್ಕಾರ ಬೆಳೆಗಳ ನೆರವಿಗೆ ಧಾವಿಸಿ ಅನ್ನದಾತರನ್ನು ಉಳಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಒತ್ತಾಯಿಸಿದರು.
ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಆಲಮಟ್ಟಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಕೃಷ್ಣಾ ಭಾಗ್ಯ ಜಲನಿಗಮ ಮುಖ್ಯ ಅಭಿಯಂತರರ ಕಚೇರಿಯವರೆಗೂ ತಮಟೆ ವಾದ್ಯದೊಂದಿಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆಗಳು ಸಮರ್ಪಕವಾಗಿ ಆಗದೇ ಇರುವದರಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದು, ಕಾಲುವೆ ನೀರನ್ನು ನಂಬಿ ಬಿತ್ತನೆ ಮಾಡಿದ ರೈತರ ಜಮೀನಿಗೆ ಸಮರ್ಪಕವಾಗಿ ನೀರು ಹೋಗುತ್ತಿಲ್ಲ, ನೀರು ಪೂರೈಸಬೇಕು ಎಂದು ಅರವಿಂದ ಕುಲಕರ್ಣಿ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆಯಾಗದೇ ಇದ್ದರೂ ಮಹಾರಾಷ್ಟ್ರ ಪಶ್ಚಿಮಘಟ್ಟದಲ್ಲಿ ಮಳೆಯಾಗಿರುವದರಿಂದ ಕೃಷ್ಣೆ ಮತ್ತು ಉಪನದಿಗಳ ಮೂಲಕ ನೀರು ಹರಿದು ಬಂದ ಪರಿಣಾಮವಾಗಿ ಆಲಮಟ್ಟಿಯ ಲಾಲ್ಬಹಾದ್ದೂರ ಶಾಸ್ತ್ರಿ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯಗಳು ತುಂಬುವಂತಾಗಿದೆ, ಎಲ್ಲಾ ಕಾಲುವೆಗಳಿಗೂ ಸಮರ್ಪಕವಾಗಿ ನೀರು ಹರಿಸಿ ಕೆರೆಗಳನ್ನು ಭರ್ತಿಗೊಳಿಸಬೇಕು ಹಾಗೂ ಕಾಲುವೆಗಳ ಕೊನೆಯಂಚಿನ ರೈತರ ಜಮೀನಿಗೆ ನೀರು ತಲುಪುವಂತೆ ಕ್ರಮಕೈಗೊಳ್ಳಬೇಕು ಎಂದರು.
ಈಗ ಜಲಾಶಯಗಳಿಗೆ ಒಳಹರಿವು ಇದ್ದು, ಅದನ್ನು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ಬಿಡದೇ ಸಮರ್ಪಕವಾಗಿ ಸಂಗ್ರಹಿಸಿಕೊಳ್ಳುವದರೊಂದಿಗೆ ಅಖಂಡ ಜಿಲ್ಲೆಯ ಎಲ್ಲಾ ಕಾಲುವೆಗಳ ಮೂಲಕ ಕೆರೆ, ಬಾಂದಾರಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಮನವಿಯನ್ನು ಉಪಮುಖ್ಯ ಅಭಿಯಂತರ ಎ.ಸುರೇಶ ಹಾಗೂ ಮು.ಏ.ನೀ.ಯೋ.ವೃತ್ತ ಅಧೀಕ್ಷಕ ಅಭಿಯಂತರ ಗೋವಿಂದ ರಾಠೋಡ ಸ್ವೀಕರಿಸಿ ಮಾತನಾಡಿದ ಅವರು ತಮ್ಮ ಮನವಿಯನ್ನು ಮೇಲಾಧಿಕಾರಿಗಳ ಮೂಲಕ ಅಧ್ಯಕ್ಷರಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ವಿಠ್ಠಲ ಬಿರಾದಾರ, ಹೊನಕೇರಪ್ಪ ತೆಲಗಿ, ಬಾಲಪ್ಪಗೌಡ ಲಿಂಗದಳ್ಳಿ, ಬಸನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ಹಾಜಿಮಲಂಗ ಕೊಡಗಾನೂರ, ಭೀಮನಗೌಡ ಬಿರಾದಾರ, ವಿರಪಾಕ್ಷಪ್ಪ ಬಿರಾದಾರ, ಶ್ರೀಶೈಲ ಸಾಸನೂರ, ದೇವು ಪೋಲೆಶಿ, ಬಸವರಾಜ ಹಂದ್ರಾಳ ಮೊದಲಾದವರಿದ್ದರು.