ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಜೀವನವೇ ಐಸ್ಕ್ರೀಮ್ ಇದ್ದಂಗ, ಐಸ್ಕ್ರೀಮ್ ಹೇಗೆ ತಿದ್ದುರು ಕರಗುತ್ತದೆ ತಿನ್ನದಿದ್ದರೆ ಕರಗುತ್ತದೆ, ಹಾಗೆಯೇ ಜೀವನ ಕರಗಿ ಮಣ್ಣಲ್ಲಿ ಮಣ್ಣಾಗುವ ಮುನ್ನ ಮಹಾದೇವನ ಒಲುಮೆಗೆ ಪಾತ್ರರಾಗೋಣ ಎಂದು ಚಟರ್ಕಿಯ ಶಂಕರಯ್ಯ ಶಾಸ್ತ್ರೀ ಹೇಳಿದರು.
ಪಟ್ಟಣದ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪರೋಪಕಾರವೇ ಪುಣ್ಯ ಎನ್ನುತ್ತಾ, ಜೀವನದಲ್ಲಿ ಬರುವ ಸುಖ ದುಃಖ, ಒಳಿತು ಕೆಡುಕು, ಕಷ್ಟ ಕಾರ್ಪಣ್ಯ, ಮೆಟ್ಟಿ ನಿಂತು, ನಿಜದ ನಿಲುವು ಅರಿಯುವ ಮೂಲಕ ಬದುಕಿನ ಬೇಕು ಬೇಡಗಳ ನಡುವೆ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದಡೆಗೆ ಕೊಂಡೊಯ್ಯುವುದು, ಜಿಗುಪ್ಸೆಗೊಂಡು ಜೀವಕ್ಕೆ ಜೀವಾಮೃತ ತುಂಬಿ, ಮನುಷ್ಯನನ್ನು ಮಹಾದೇವನಾಗಿ ಮಾಡುವ ಸದುದ್ದೇಶದಿಂದ ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯನ್ನು ಆಯೋಜಿಸುತ್ತಿರುವ ಚನ್ನಬಸವ ಶಿವಾಚಾರ್ಯರು ಕಾರ್ಯ ಸುತ್ಯಾರ್ಹ ಎಂದು ಬಣ್ಣಿಸಿದರು.
ಮಾಸಿಕ ಹುಣ್ಣಿಮೆಯ ಶಿವಾನುಭವ ಗೋಷ್ಠಿಯ ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಶುಭಾಶಯ ಕೋರುತ್ತಾ, ಸುಸಂಸ್ಕೃತ ಸುಂದರ ಬದುಕು ಕಟ್ಟಿಕೊಳ್ಳಲು, ಸತ್ಸಂಗದಲ್ಲಿ ಸುತ್ತಮುತ್ತಲಿನ ಗ್ರಾಮದ, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಆಶಿಸಿದರು.
ಶರಣಕುಮಾರ ಯಾಳಗಿ ಹಾಗೂ ಯಮನೇಶ ಯಾಳಗಿ ಇವರಿಂದ ಸಂಗೀತ ಕಾರ್ಯಕ್ರಮ ಮೂಡಿ ಬಂತು, ಅಭಿಷೇಕ್ ಪಾಟೀಲ, ಅವ್ವಣ್ಣ ಮಡಿವಾಳಕರ್, ಶಿವರಾಯ ಸುಂಕದ, ಬಸಣ್ಣ ತಳವಾರ, ಸೇರಿದಂತೆ ಮಹಿಳೆಯರ, ಮಕ್ಕಳು ಉಪಸ್ಥಿತರಿದ್ದರು ಡಾ ಯಂಕನಗೌಡ ಎಸ್ ಪಾಟೀಲ ನಿರೂಪಿಸಿ, ವಂದಿಸಿದರು.

