ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಹೊರವಲಯದಲ್ಲಿರುವ ಆಲಗೂರ ಎಂಟರ್ಪ್ರೈಸಸ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಸುಮಾರು 45 ರಿಂದ 50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂಗಡಿ ಮಾಲಿಕ ಮೆಹ್ಮದ್ ಸಾದ್ ಸಾಧಿಕ್ ಆಲಗೂರ ಅವರು ಮಾಹಿತಿ ನೀಡಿದ್ದಾರೆ.
ಅಗ್ನಿ ಅವಘಡ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಮುಧೋಳ ಹಾಗೂ ಜಮಖಂಡಿಯ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಕಾರ್ಖಾನೆಯಲ್ಲಿ ತಯಾರಿಸುತ್ತಿದ್ದ ಫರ್ನಿಚರ್, ಸೋಫಾ ಸೇರಿದಂತೆ ಇತರ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

