ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಂವಿಧಾನದ ಮೂಲ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಕೈಗೊಳ್ಳಲಾಗಿದೆ ಎಂದು ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಗುರುವಾರ ಸಂವಿಧಾನ ಜಾಗೃತಿ ಸಮಾವೇಶದ ಅಂಗವಾಗಿ ಜರುಗಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯ ಹಾಗೂ ದೇಶದಲ್ಲಿ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಗಗನ ಕುಸುಮವಾಗಿ ಕಾಣುತ್ತಿದೆ. ಆಳುವ ಸರ್ಕಾರಗಳು ಬಂಡವಾಳಶಾಹಿಗಳ ಹಿಡಿತಕ್ಕೆ ಸಿಲುಕಿ ವರ್ಗ ಸಂಘರ್ಷ ಹೆಚ್ಚಾಗಲು ಪ್ರೇರೆಪಿಸುತ್ತಿವೆ ಆದ್ದರಿಂದ ಸಂವಿಧಾನ ಜಾಗೃತಿ ಇಂದು ಅಗತ್ಯವಾಗಿದ್ದು, ಇದೇ ದಿ:೨೨ ಭಾನುವಾರ ದಂದು ಪಟ್ಟಣದ ಟಿಪ್ಪುಸುಲ್ತಾನ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಸಂವಿಧಾನ ರೂಪಕದ ಮೆರವಣಿಗೆ ನಂತರ ಹತ್ತಿರದ ಬಿ.ಎಲ್.ಡಿ.ಇ ಪ್ರೌಢಶಾಲಾ ಆವರಣದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸಮಾವೇಶದಲ್ಲಿ ಸಚಿವರುಗಳಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಸಹಿತ ಶಾಸಕರು ಹಾಗೂ ಅಖಂಡ ಸಿಂದಗಿ ತಾಲ್ಲೂಕಿನ ಎಲ್ಲ ಸಮುದಾಯಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ನೂತನ ಸಂಚಾಲಕ ಸಿದ್ಧಾರ್ಥ ರೂಗಿ ಮಾತನಾಡಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ, ಕಾಶೀನಾಥ ತಳಕೇರಿ, ಚಂದ್ರಶೇಖರ ಕಡಕೋಳಕರ, ಅರುಣ ಕೋರವಾರ, ಜಾನು ಗುಡಿಮನಿ, ಮಹಾಂತೇಶ ಹಡಪದ, ಲಕ್ಷ್ಮೀಕಾಂತ ಕುಂಬಾರ, ಶರಣು ನಾಟೀಕಾರ, ಮಹಾಂತೇಶ ಕೂಟನೂರ, ಮಲ್ಲಿಕಾರ್ಜುನ ಮಸಬಿನಾಳ, ಸುಭಾಸ್ ನಾಟೀಕಾರ, ಕಮಲಸಾಬ್ ಕಟಮನಹಳ್ಳಿ ಸೇರಿದಂತೆ ತಾಲ್ಲೂಕು ಪದಾಧಿಕಾರಿಗಳು ಇದ್ದರು.

