ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಇಟ್ಟಿ
ಜಮಖಂಡಿ: ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಯುದ್ಧದಿಂದ ಸದ್ಯ ಜಗತ್ತಿನ ಹಲವಾರು ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡುವ ಮೂಲಕ ತೈಲ ಆಮದುಗೆ ದೊಡ್ಡ ಸಂಕಷ್ಟ ತಂದಿಟ್ಟಿದೆ ಇರಾನ್. ಶೇ.60ರಷ್ಟು ತೈಲದ ಮೇಲೆ ಅವಲಂಬಿತವಾಗಿರುವ ಭಾರತ, ಸದ್ಯ ದೇಶಾದ್ಯಂತ ಗ್ಯಾಸ್ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಯುದ್ಧ ಸಂಘರ್ಷದಿಂದ ಗ್ಯಾಸ್ ಕೊರತೆಯನ್ನು ಎದುರಿಸುತ್ತಿರುವ ಭಾರತಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಒಂದೆಡೆ, ಕೇಂದ್ರ ಸರ್ಕಾರವು ಎಲ್ಪಿಜಿ ಹಾಗೂ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ದಿಢೀರ್ ಏರಿಸಿದೆ. ಮತ್ತೊಂದೆಡೆ, ಹೋಟೆಲ್ ಉದ್ಯಮವನ್ನೇ ನಂಬಿರುವ ಜನರು, ವಾಣಿಜ್ಯ ಸಿಲಿಂಡರ್‌ಗಳ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ರಾಜ್ಯದ ನಗರಗಳಲ್ಲಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಬೇರೆ ದಾರಿಯಿಲ್ಲದೆ ಕ್ಲೋಸ್ ಆಗುತ್ತಿವೆ.
ಇಂತಹ ಪರಿಸ್ಥಿತಿಯಲ್ಲಿ, ಚೆನ್ನೈನ ಒಂದು ಹೋಟೆಲ್‌ನಲ್ಲಿ ಇಡ್ಲಿ, ವಡೆ ಜೊತೆಗೆ ಗ್ಯಾಸ್ಗೂ ಸೇರಿಸಿ ಹಾಕಿದ ಬಿಲ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಬಿಲ್ ಅನ್ನು ನೋಡಿದ ನೆಟ್ಟಿಗರಂತು ಹೋಟೆಲ್ ಮಾಲೀಕರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಚೆನ್ನೈನ ಪೆರುಂಗುಡಿಯ ಹೋಟೆಲ್‌ನಲ್ಲಿ ಗ್ರಾಹಕರೊಬ್ಬರು, ಇಡ್ಲಿ ಮತ್ತು ವಡಾ ಆರ್ಡರ್ ಮಾಡಿದ್ದರು. ಇಡ್ಲಿ ಮತ್ತು ವಡೆಗೆ 33.33 ಬಿಲ್ ಹಾಕಲಾಗಿದ್ದು, ಅದರಲ್ಲಿ ಶೇ.5ರಷ್ಟು ಜಿಎಸ್‌ಟಿ ಸೇರಿಸಲಾಗಿತ್ತು. ಆದರೆ, ಅದರ ಕೆಳಗೆ ಹೆಚ್ಚುವರಿ 9.52 ರೂ. ಗ್ಯಾಸ್ ಶುಲ್ಕ ಎಂಬುದನ್ನು ನೋಡಿ ಅವರ ಪಿತ್ತ ನೆತ್ತಿಗೇರಿದೆ. ಈ ಬಿಲ್ ನೋಡಿದ ನೆಟ್ಟಿಗರು, ಬಾಯಿಂಗೆ ಬಂದಂತೆ ಹೋಟೆಲ್ ಮಂದಿಯನ್ನು ಟೀಕಿಸುತ್ತಿದ್ದಾರೆ. ಏನಿದು ಹೊಸ ಆದಾಯದ ಮೂಲವೇ? ಹೋಟೆಲ್‌ನಲ್ಲಿ ಅಡುಗೆ ಮಾಡಿದರೆ ಬಿಲ್‌ನಲ್ಲಿ ಗ್ಯಾಸ್ ವೆಚ್ಚವನ್ನು ಸೇರಿಸುವುದು ಎಷ್ಟು ಸರಿ? ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು, ಹೋಟೆಲ್ ನಡೆಸುವುದು ಅಷ್ಟೊಂದು ಹೊರೆಯಾಗಿದ್ದರೆ, ಬಂದ್ ಮಾಡಬೇಕು ಎಂದು ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

