ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಶರಣರ, ದಾರ್ಶನಿಕರ, ಚಿಂತಕರ ಜೀವನ ಚರಿತ್ರೆಗಳನ್ನು ಅರಿತುಕೊಂಡು ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳನ್ನು ಇಂತಹ ಆದ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ಇಂದಿನ ಯುವ ಪೀಳಿಗೆಯಲ್ಲಿ ಧಾರ್ಮಿಕ ಚಿಂತನೆಯ ಮನೋಭಾವ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಜೇರಟಗಿ ವಿರಕ್ತಮಠದ ಖ್ಯಾತ ಪ್ರವಚನಕಾರ ಮಹಾಂತ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾಶಿವಯೋಗಿಗಳ ೮೫ನೇ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ಮಹಾಶಿವಯೋಗಿಗಳ ಪುರಾಣ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಶಕ್ತಿ ಸಂಗಮ ಸದ್ಗುರು ವೀರೇಶ್ವರ ಮಠವಾಗಿದೆ. ಆದ್ದರಿಂದ ಭಕ್ತರು ಶ್ರೀಮಠದ ಮೇಲೆ ಶ್ರದ್ಧೆ ಭಕ್ತಿಯಿಡುವ ಮೂಲಕ ಸತ್ಯದ ನೆಲಘಟ್ಟದ ಮೇಲೆ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಹಿರೇಮಠದ ಶಂಕ್ರಯ್ಯ ಹಿರೇಮಠ, ಶ್ರೀಮಠದ ಅರ್ಚಕ ಬಸಯ್ಯ ಮಠಪತಿ ಇದ್ದರು.
ಗುರುನಾಥ ಮೈಂದರಗಿ ಬಸವಣ್ಣನಾಗಿದ್ದರು. ಅರ್ಚಕ ಶಾಂತಯ್ಯ ಮಠಪತಿ ಪುರಾಣ ಗ್ರಂಥಕ್ಕೆ ಪೂಜಾ ನೆರವೇರಿಸಿದರು. ಸಂಗೀತ ಸೇವೆಯನ್ನು ಕೆರುಟಗಿ ಹಿರೇಮಠದ ಗವಾಯಿ ರೇಣುಕಾಚಾರ್ಯ ಹಿರೇಮಠ, ತಬಲಾ ವಾದಕರಾಗಿ ಮಾಂತೇಶ ಕಾಳಗಿ. ಎಂ.ಡಿ.ಪಾಟೀಲ ಸೇರಿದಂತೆ ಚಿಕ್ಕಸಿಂದಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.

