ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗ ಜಿಲ್ಲಾಡಳಿತ ಹಾಗೂ ವಿಜಯಪುರ ರೋಟರಿ ಕ್ಲಬ್‌ನ ಇವರ ಸಹಯೋಗದಲ್ಲಿ ಪ್ರಯಾಣಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಉದ್ದೇಶದಿಂದ ಇತ್ತೀಚೆಗೆ ಒಂದು ದಿನದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರಬರ ಅವರು ಮಾತನಾಡಿ, ವಿಭಾಗದ ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಬಸ್‌ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಾಲಯ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಲಾಗಿದೆ. ಪರವಾನಿಗೆದಾರರು ಪ್ರತಿನಿತ್ಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಲು ಬಸ್ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ ಎಂಬ ವಾಟ್ಸ್-ಅಪ್ ಗ್ರೂಪ್ ರಚಿಸಿಕೊಂಡು ಅಲ್ಲಿ ಪ್ರತಿ ದಿನ ಮೂರು ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತಾಗಿ ಜಿಪಿಎಸ್ ಫೋಟೊ ಅಪ್‌ಲೋಡ್ ಮಾಡಲು ಸಿಬ್ಬಂದಿಗೆ ಸೂಚಿಸಲಾಗಿದೆ. ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಕಾರ್ಮಿಕರು ಪ್ರತಿದಿನ ಅಪಲೋಡ್ ಮಾಡಿದ ಪೋಟೊಗಳನ್ನು ಪರಿಶೀಲಿಸಿ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರಾಣೇಶ ಜಹಾಗೀರದಾರ ಮಾತನಾಡಿ, ಸಾರ್ವಜನಿಕರು ನಿಲ್ದಾಣಗಳಲ್ಲಿ ಕಸ ಎಲ್ಲೆಂದರಲ್ಲಿ ಎಸೆಯದೇ ಬಸ್ ನಿಲ್ದಾಣಗಳ ಆವರಣ ನಮ್ಮ ಆಸ್ತಿಯಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದ ಅಧಿಕಾರಿ, ಸಿಬ್ಬಂದಿ, ಉಪಸ್ಥಿತರಿದ್ದರು.

