ಲೇಖನ
– ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ
ಫೋ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಮನುಷ್ಯರಾದ ನಾವು ಜೀವನೋಪಾಯಕ್ಕಾಗಿ ಯಾವುದೇ ಉದ್ಯೋಗವನ್ನು ಕೈಗೊಂಡರೂ ಅದರ ಹಿಂದಿರುವ ನಗ್ನ ಸತ್ಯ ಅದು ‘ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ’ಯೇ ಎಂದು ದಾಸರುಗಳು ಹೇಳಿದ್ದಾರೆ. ಆ ಮಾತು ಸಾರ್ವತ್ರಿಕ ಸತ್ಯವೂ ಹೌದೆನ್ನಬಹುದು. ಮನುಷ್ಯ ತಾನು ದುಡಿದದ್ದೆಲ್ಲ ತನ್ನ ಗೇಣುದ್ದದ ಹೊಟ್ಟೆಗಾಗಿ ಎಂದು ತನ್ನ ದುಡಿತದ ಅವಧಿಯಲ್ಲಿ ದುಡಿದ ಮೊತ್ತವನ್ನೆಲ್ಲಾ ಸಂಪೂರ್ಣವಾಗಿ ಖರ್ಚು ಮಾಡುತ್ತಾ ಹೋದರೆ ಪರಿಸ್ಥಿತಿ ಹೇಗಿರಬಹುದು ಎಂದು ಒಂದು ಕ್ಷಣ ಯೋಚಿಸುವುದು ಉತ್ತಮ. ದುಡಿಮೆ ಮಾಡದೇ ಇರುವವರು ಯಾರೂ ಇರಲಾರರೆಂದು ಹೇಳಬಹುದಾಗಿದ್ದು, ಆದರೆ ದುಡಿದು ಆದಾಯ ಗಳಿಸುವ ವಿಧಾನಗಳು ಮಾತ್ರ ಬೇರೆ ಬೇರೆ ಇರಬಹುದಷ್ಟೇ. ಸಾಮಾನ್ಯವಾಗಿ ಮನುಷ್ಯನ ದೇಹ ಮತ್ತು ಮನಸ್ಸು ನಿರಂತರವಾಗಿ ಎಲ್ಲಾ ವಯಸ್ಸಿನಲ್ಲಿಯೂ ದುಡಿಯಲು ಏಕ ಪ್ರಕಾರವಾಗಿ ಸಹಕರಿಸುವುದಿಲ್ಲ. ಹಾಗಾಗಿ ಯೌವನದಲ್ಲಿ ದುಡಿದ ಮೊತ್ತದ ಒಂದು ಪಾಲನ್ನು ಮುಪ್ಪಿನಲ್ಲಿ ಬಳಸಿಕೊಳ್ಳುವಂತಾಗಬೇಕೆಂದರೆ ದುಡಿಯುತ್ತಿರುವಾಗಲೇ ನಿರಂತರವಾಗಿ ನಿರ್ದಿಷ್ಟ ಮೊತ್ತದ ಉಳಿತಾಯವನ್ನು ಪ್ರಾರಂಭಿಸಲೇಬೇಕು. ಇಲ್ಲವೆಂದಾದಲ್ಲಿ ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎಂಬಂತಾಗಿ ಯಾವ ಶಸ್ತçವನ್ನು ಯಾವಾಗ ಮತ್ತು ಹೇಗೆ ಬಳಸಬೇಕೆಂದೂ ಅರಿಯದೆ ಯುದ್ಧದಲ್ಲಿ ಅಂದರೆ ಬದುಕಲ್ಲಿ ಸೋಲುವ ಪ್ರಮೇಯ ಒದಗಿಬರಬಹುದು.
ನಾವುಗಳು ದುಡಿಯುವ ದಿನಗಳಲ್ಲಿ ದುಡಿದ ಸಂಪಾದನೆಯನ್ನು ಅಲ್ಲಿಂದಲ್ಲಿಗೇ ಖರ್ಚು ಮಾಡುತ್ತಾ ಹೋದರೆ ಮುಂದೊಂದು ದಿನ ‘ಸಂಕಟ ಬಂದಾಗ ವೆಂಕಟರಮಣ’ ಎಂಬಂತಾಗಬಹುದು. ಅಂದರೆ ಕಷ್ಟಗಳು ಬಂದಾಗ ಅಥವಾ ಮುಪ್ಪಿನ ಅವಧಿಯಲ್ಲಿ ಕಂಡವರ ಬಳಿ ಹಣಕ್ಕಾಗಿ ಸಹಾಯ ಹಸ್ತವನ್ನು ಚಾಚಬೇಕಾಗುತ್ತದೆ. ಹಾಗಾಗಿ ಮನುಷ್ಯನಿಗೆ ಬದುಕಲು ಆಹಾರ ಎಷ್ಟು ಪ್ರಮುಖವೋ ಹಾಗೆಯೇ ಉಳಿತಾಯವೂ ಕೂಡಾ ಅಷ್ಟೇ ಪ್ರಾಮುಖವಾಗಬೇಕು. ಈ ಕಾರಣಕ್ಕಾಗಿಯೇ ಪ್ರಸಿದ್ದ ಅರ್ಥಶಾಸ್ತ್ರಜ್ಞರು ಉಳಿತಾಯವನ್ನು ಪರ್ಯಾಯವಾದ ಬಂಡವಾಳಕ್ಕೆ ಸಮಾನವೆಂದು ಬಣ್ಣಿಸಿದ್ದಾರೆ. ಒಂದು ಬಾರಿ ಆಳವಾಗಿ ಯೋಚಿಸಿ ನೋಡಿದರೆ ನಾವು ಇಂದು ಉಳಿಸುವ ಒಂದು ರೂಪಾಯಿಯೂ ಕೂಡಾ ಭವಿಷ್ಯದ ಬಂಡವಾಳವಾಗಿ ಬಳಕೆಯಾಗುತ್ತದೆ. ಅಂದರೆ ಯಾವುದಾದರೊಂದು ಸದುದ್ದೇಶಕ್ಕೆ ಆ ಮೊತ್ತ ನೆರ ಬಂಡವಾಲವಾಗಿ ಪರಿವರ್ತನೆಯಾಗುತ್ತದೆ. ಮನುಷ್ಯ ಜೀವಿತದಲ್ಲಿ ಎಷ್ಟು ಗಳಿಸುತ್ತಾನೆ ಅಥವಾ ಸಂಪಾದಿಸುತ್ತಾನೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಆ ಸಮಪಾದನೆಯಲ್ಲಿ ಎಷ್ಟು ಮೊತ್ತವನ್ನು ಭವಿಷ್ಯಕ್ಕಾಗಿ ಉಳಿಸಿ ಕೂಡಿಡುತ್ತಾನೆ ಎನ್ನುವುದು ಮುಖ್ಯವಾದ ಅಂಶ. ಆದ್ದರಿಂದ ಇಂದಿನಿಂದಲೇ, ಈ ಕ್ಷಣದಿಂದಲೇ ಗಳಿಸಿದ ಮೊತ್ತದಲ್ಲಿ ಒಂದು ಪಾಲನ್ನು ಭವಿಷ್ಯಕ್ಕಾಗಿ ಉಳಿಸಿ ಕೂಡಿಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿ.

ಉಳಿತಾಯಕ್ಕೆ ಹಲವು ಸರಳ ಮಾರ್ಗಗಳು
ವ್ಯರ್ಥ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು
ಮನೆ ದಿನ ಬಳಕೆಯ ವಸ್ತುಗಳನ್ನು ಖರಿದಿಸುವಾಗ ಪೂರ್ವ ಸಿದ್ದತೆಯೊಂದಿಗೆ ಮಾರುಕಟ್ಟೆಗೆ ಹೊರಡುವುದು ಉತ್ತಮ. ಇಲ್ಲವಾದಲ್ಲಿ ನೇರವಾಗಿ ಮಾರುಕಟ್ಟೆಗೆ ಹೋಗಿ ಅಲ್ಲಿನ ಮಹಲುಗಳಲ್ಲಿ ಅಂದವಾಗಿ ಜೊಡಿಸಿಟ್ಟಿರುವ ಆಕರ್ಷಕ ವಸ್ತುಗಳನ್ನು ಕಂಡಾಗ ಅಲ್ಲಿರುವ ವಸ್ತುಗಳು ನಮಗೆ ಅವಶ್ಯವಿಲ್ಲದಿದರೂ ಕಣ್ಣಿನ ಆಕರ್ಷಣೆಗೆ ಒಳಗಾಗಿ ಕಂಡದ್ದನ್ನೆಲ್ಲ ಖರೀದಿ ಮಾಡಬೇಕೆಂಬ ‘ಕೊಳ್ಳುಬಾಕ ಸಂಸ್ಕೃತಿ’ ಖಂಡಿತವಾಗಿಯೂ ಬೇಡ. ಆನ್ ಲೈನ್ ಖರೀದಿ ಮಾಡಬೇಕೆಂಬ ವ್ಯಾಮೊಹದ ಹೆಸರಲ್ಲಿ ಅನಾವಶ್ಯಕ ಖರ್ಚು ಮಾಡುವದ್ದರಿಂದ ಹಿಂದಕ್ಕೆ ಸರಿಯುವುದು ಉಳಿತಾಯದ ಪ್ರಥಮ ಮಾರ್ಗವಾಗಿದೆ.
ಅಗತ್ಯವಿದ್ದಾಗ ಮಾತ್ರ ಸ್ವಂತ ವಾಹನವನ್ನು ಬಳಸುವ ಪರಿಪಾಠವನ್ನು ಬೆಳೆಸಿಕೊಳ್ಳಿ
ಇಂದಿನ ದಿನಗಳಲ್ಲಿ ನಿರಂತರವಾಗಿ ಏರಿಳಿತದಿಂದ ಕೂಡಿರುವ ಹಾಗೂ ಗಗನಕ್ಕೇರಿರುವ ಪೆಟ್ರೋಲ್ ಬೆಲೆ ಹಾಗೂ ಟ್ರಾಫಿಕ್ ಜಾಮ್‌ನ ಕಿರಿಕಿರಿಯಲ್ಲಿ ಸ್ವಂತ ವಾಹನದ ಬಳಕೆಯೂ ತುಂಬಾ ದುಬಾರಿ ಹಾಗೂ ದುಸ್ತರವಾಗುತ್ತದೆ. ತೀರಾ ಅವಶ್ಯಕವಲ್ಲದಿದ್ದದೂ, ಶೋಕಿಗಾಗಿ, ಅಂತಸ್ತಿಗಾಗಿ ಹಾಗೂ ತೀರಾ ಅವಶ್ಯವಲ್ಲದ ವಿಚಾರಗಳಿಗಾಗಿ ಸ್ವಂತ ವಾಹನದಲ್ಲಿ ನಗರವಿಡೀ ಸುತ್ತುವ ಪರಿಪಾಠವು ನಮ್ಮ ಜೇಬಿಗೆ ನಾವೇ ಪರೋಕ್ಷವಾಗಿ ಕತ್ತರಿ ಹಾಕಿಕೊಂಡಂತೆ ಎನ್ನುವುದನ್ನು ಮರೆಯಬಾರದು. ಇದರಿಂದಾಗಿ ಪರಿಸರಕ್ಕೂ ಕೂಡಾ ಹಾನಿಯಾಗುವುದರಿಂದ ಒಬ್ಬರ ಪ್ರಯಾಣಕ್ಕಾಗಿ ಲಭ್ಯವಿರುವ ಮಾಮೂಲು ಸಾರಿಗೆ ವಾಹನಗಳ ಬಳಕೆ ಮಾಡುವುದು ಉತ್ತಮ.
ಮೋಜಿನ ಪಾರ್ಟಿ ಹೆಸರಿನಲ್ಲಿ ಹೊಟೆಲ್ ಊಟ/ತಿಂಡಿಗಳು ಬೇಡ
ನಿರಂತರ ಹೋಟೇಲ್ ಊಟ ಆರೋಗ್ಯದ ದೃಷ್ಟಿಯಿಂದಲೂ ಕೂಡಾ ಒಳ್ಳೆಯದಲ್ಲ ಹಾಗೂ ಹಣಕಾಸಿನ ವಿಚಾರದಲ್ಲಿ ಈ ವ್ಯವಸ್ಥೆಯು ತುಂಬಾ ದುಬಾರಿ ಎಂದೇ ಹೇಳಬಹುದು. ಕುಟುಂಬದ ಸದಸ್ಯರ ಜತೆಯಲ್ಲಿ ಮೋಜಿನ ಪಾರ್ಟಿಯನ್ನು ಮಾಡಬೇಕೆಂದೆನಿಸಿದರೆ ಮನೆಯಲ್ಲಿಯೇ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿದಲ್ಲಿ ಖರ್ಚನ್ನು ಕಡಿಮೆ ಮಾಡುವುದರೊಂದಿಗೆ ಆರೋಗ್ಯಕ್ಕೂ ಉತ್ತಮವಾಗಬಲ್ಲುದು. ಇದರಿಂದಾಗಿ ಕುಟುಂಬದ ಖಾಸಗಿತನವನ್ನೂ ಕಾಪಾಡುವುದರೊಂದಿಗೆ ಕುಟುಂದ ಸದಸ್ಯರೊಂದಿಗೆ ಉತ್ತಮ ಬಾಂಧವ್ಯವನ್ನೂ ಗಟ್ಟಿಗೊಳಿಸಿಕೊಳ್ಳಬಹುದು.
ಖರೀದಿಯಲ್ಲಿ ಹೋಲ್‌ಸೆಲ್ ಖರೀದಿಗೆ ಆದ್ಯತೆಯನ್ನು ನೀಡಿರಿ
ಕುಟುಂಬದ ದಿನನಿತ್ಯದ ಬಳಕೆಗೆ ಅವಶ್ಯವಿರುವ ದಿನ ಬಳಕೆಯ ವಸ್ತುಗಳನ್ನು (ತರಕಾರಿ, ಹಾಲು, ಮೊಸರು ಮುಂತಾದ ಅಲ್ಪಾಯುಷಿ ವಸ್ತುಗಳನ್ನು ಹೊರತುಪಡಿಸಿ) ಖರೀದಿಸುವಾಗ ಆದಷ್ಟು ಹೊಲ್‌ಸೆಲ್ ಖರೀದಿಗೆ ಪ್ರಾಶಸ್ತ್ಯವನ್ನು ನೀಡುವುದು ಉತ್ತಮ. ಏಕೆಂದರೆ ಹೋಲ್‌ಸೆಲ್‌ನಲ್ಲಿ ಹೆಚ್ಚು ವಸ್ತುಗಳನ್ನು ಖರೀದಿಸುವುದರಿಂದ ವಸ್ತುವು ಕಡಿಮೆ ಬೆಲೆಗೆ ದೊರೆಯುತ್ತದೆ. ಹಾಗೂ ಖರೀದಿಸಿದ ಹೆಚ್ಚುವರಿ ವಸ್ತುವು ಮುಂದಿನ ದಿನದಲ್ಲಿ ಬಳಕೆಗೆ ಬೇಕಾಗುವ ವಸ್ತುವೇ ಆಗಿದ್ದು, ದಿನ ಬಳಕೆಯ ವಸ್ತು ಖರೀದಿಗೆ ವ್ಯಯ ಮಾಡುವ ಅವಧಿ ಮತ್ತು ಪ್ರಯಾಣ ವೆಚ್ಚವನ್ನು ಪರಿಣಾಮಕಾರಿಯಾಗಿ ಉಳಿಸಬಹುದಾಗಿದೆ.
ಕುಟುಂಬದ ಜೊತೆಯಲ್ಲಿ ಪ್ರಯಾಣಿಸುವ ಸಂದರ್ಭ ತಿಂಡಿಯ ವ್ಯವಸ್ಥೆ ಮಾಡಿಕೊಳ್ಳಿ: ಬಸ್/ರೈಲು ಅಥವಾ ಇನ್ನಿತರ ವಾಹನಗಳಲ್ಲಿ ದೂರದೂರಿಗೆ ಕುಟುಂಬದ ಸದಸ್ಯರೊಂದಿಗೆ ಪ್ರಯಾಣಿಸುವ ಸಂದರ್ಭವಿದ್ದಲ್ಲಿ ತಂಗುದಾಣದಲ್ಲಿ ಅಥವಾ ಮಾರ್ಗ ಮದ್ಯದಲ್ಲಿ ಹೋಟೇಲ್‌ಗಳಿಗೆ ತಿಂಡಿ ತಿನ್ನಲು ಹೋದರೆ ಖರ್ಚು ಅಧಿಕವಾಗುವ ಸಾಧ್ಯತೆಗಳೇ ಹೆಚ್ಚು. ಅಂತಹ ವ್ಯರ್ಥ ಖರ್ಚಿಗೆ ಕಡಿವಾಣ ಹಾಕುವ ಸಲುವಾಗಿ ಕುಟುಂಬದ ಜತೆ ಪ್ರಯಾಣದ ಸಂದರ್ಭದಲ್ಲಿ ಮನೆಯಲ್ಲೇ ಅವಶ್ಯವಿರುವ ತಿಂಡಿ ತಿನಸುಗಳನ್ನು ತಯಾರಿಸಿ ಪೊಟ್ಟಣದಲ್ಲಿ ತೆಗೆದುಕೊಂಡು ಹೋದರೆ ಹೋಟೇಲ್‌ಗೆ ಹಾಕುವ ಹಣವನ್ನು ಉಳಿಸುವುದರೊಂದಿಗೆ ಆರೋಗ್ಯವನ್ನೂ ಕಾಪಾಡಬಹುದು.
ಆನ್‌ಲೈನ್ ಪಾವತಿಗಳಿಗೆ ಹೆಚ್ಚಿನ ಆದ್ಯತೆ ನೀಡಿರಿ
ರೈಲು ಮತ್ತು ಬಸ್ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ಖರೀದಿಗೆ, ಸಿನಿಮಾ ಟಿಕೆಟ್ ಬುಕ್ ಮಾಡಲು, ವಿದ್ಯುತ್ ಮತ್ತು ದೂರವಾಣಿ, ನೀರಿನ ಬಿಲ್ ಪಾವತಿಸಲು, ಹಾಗೂ ಇತರ ಇಂಟರ್‌ನೆಟ್ ಬ್ಯಾಂಕಿಂಗ್, ಪೇಟಿಎಂ, ಭೀಮ್ ವ್ಯವಸ್ಥೆಯ ಮೂಲಕ ಆನ್‌ಲೈನ್ ಪಾವತಿಗೆ ಅವಕಾಶವಿರುವ ಎಲ್ಲಾ ಪಾವತಿಗಳನ್ನು ಆನ್‌ಲೈನ್ ಮೂಲಕ ಮಾಡುವುದು ಉತ್ತಮ. ಇದರಿಂದಾಗಿ ಪಾರದರ್ಶಕ, ನಿಖರ ಹಾಗೂ ವಸ್ತುನಿಷ್ಟವಾದ ಪಾವತಿ ಸಾಧ್ಯವಾಗುತ್ತದೆ. ಜೊತೆಗೆ ಪಾವತಿಗಾಗಿ ಕಛೇರಿಗೆ ತೆರಳುವ ಪ್ರಯಾಣದ ಮತ್ತು ಸರತಿಯ ಸಾಲಲ್ಲಿ ನಿಲ್ಲುವ ಸಮಯದ ಜೊತೆಗೆ ಪ್ರಯಾಣದ ವೆಚ್ಚವನ್ನೂ ಸಮರ್ಪಕವಾಗಿ ಉಳಿಸಬಹುದು. ಆನ್‌ಲೈನ್ ಪಾವತಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರಕಾರವು ಪ್ರತೀ ಆನ್‌ಲೈನ್ ಪಾವತಿಗೆ ನಿಗದಿದ ಶೇಕಡಾ ದರದ ಪ್ರೋತ್ಸಾಹ ಧನವನ್ನೂ ಪಾವತಿದಾರರಿಗೆ ನೀಡುತ್ತಿದೆ.
ಹಿತ ಮಿತವಾದ
ಪೀಠೋಪಕರಣಗಳನ್ನು ಬಳಸಿ
ಪಕ್ಕದವರ ಮನೆಯ ಐಷಾರಾಮಿ ಪೀಠೋಪಕರಣಗಳನ್ನು ನೋಡಿ ನಮಗೂ ಅದೇ ರೀತಿಯ ಪೀಠೋಪಕರಣಗಳು ನಮಗೂ ಬೇಕು ಎಂದು ಹಠಕ್ಕೆ ಬಿದ್ದು ಖರೀದಿಸಿ ನಿಮ್ಮ ಮನೆಯನ್ನು ಸ್ಟೋರ್ ರೂಮನ್ನಾಗಿ ಮಾಡಿಕೊಳ್ಳುವ ಬದಲಾಗಿ, ನಿಮಗೂ ನಿಮ್ಮ ಮನೆಗೂ ಅವಶ್ಯವಿರುವ ಹಾಗೂ ನಿಮ್ಮ ಮನೆಯಲ್ಲಿ ಬಳಸಲು ಅವಕಾಶವಿರುವಂತಹ ಪೀಠೋಪಕರಣಗಳನ್ನು ಅವಶ್ಯಕತೆಯಿದ್ದರಷ್ಟೇ ಖರೀದಿಸಿರಿ. ಪೀಠೋಪಕರಣಗಳು ನೋಡೋದಿಕ್ಕೆ ಸರಳ ಹಾಗೂ ಕುಳಿತುಕೊಳ್ಳಲು ಆರಾಮದಾಯಕವಾಗಿದ್ದರೆ ಸಾಕು. ಇದರಿಂದಾಗಿ ಅನಗತ್ಯ ಖರ್ಚನ್ನು ಕಡಿಮೆ ಮಾಡಿ ಉಳಿತಾಯ ಮಾಡಬಹುದು.
ಮೊಬೈಲ್ ಬಳಕೆ ಸಾಮಾನ್ಯವಾಗಿರಲಿ
ಇಂದಿನ ಯುಗದಲ್ಲಿ ಮೂರು ಹೊತ್ತು ಊಟ ಮಾಡಲು ಕಷ್ಟವಾದರೂ, ಅನಿವಾರ್ಯವಾಗಿರುವ ಶೌಚಾಲಯವಿಲ್ಲದಿದ್ದರೂ ಪರವಾಗಿಲ್ಲ, ಊಟಕ್ಕಿಂತಲೂ ಮೊಬೈಲ್ ಪ್ರಾಮುಖ್ಯವಾದ ವಸ್ತುವಾಗಿಬಿಟ್ಟಿದೆ. ‘ಹೊಟ್ಟೆಗೆ ಹಿಟ್ಟಿಲ್ಲದ್ದಿದರೂ ಜುಟ್ಟಿಗೆ ಮಲ್ಲಿಗೆ’ ಎಂಬ ಮಾತಿನಂತೆ ಪ್ರತಿಯೊಬ್ಬರಿಗೂ ಸ್ಮಾರ್ಟ್ ಫೋನೇ ಬೇಕು. ಫೋನ್‌ಗಳೇನೋ ಬೇಕು ಆದರೆ ನಮ್ಮ ಆದಾಯ ಹಾಗೂ ಅವಶ್ಯಕತೆಗನುಗುಣವಾಗಿ ಮೊಬೈಲ್‌ನ್ನು ಖರೀದಿಸಿ ಹಾಗೂ ಅವಶ್ಯವಿದ್ದಡೆಯಷ್ಟೇ ಬಳಸಿಕೊಳ್ಳಿರಿ. ನಿಮ್ಮ ಮೊಬೈಲ್ ಬಳಕೆ ಕೂಡಾ ಅವಶ್ಯಕತೆಗೆ ತಕ್ಕಷ್ಟೇ ಇದ್ದಲ್ಲಿ ಮೊಬೈಲ್ ಕರೆನ್ಸಿ, ಇಂಟರ್‌ನೆಟ್, ಮೆಸೆಜ್ ಹೆಸರಿನಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದು ತಪ್ಪಿ ಉಳಿತಾಯ ಮಾಡಬಹುದಾಗಿದೆ.
ಆಕರ್ಷಕ ಜಾಹಿರಾತುಗಳ ಮೊಡಿಗೆ ಒಳಗಾಗದಿರಿ
ದಿನನಿತ್ಯ ದೂರದರ್ಶನ, ವೃತ್ತಪತ್ರಿಕೆ, ಎಫ್.ಎಂ, ರೇಡಿಯೋ, ಜಾಹೀರಾತು ಫಲಕಗಳಲ್ಲಿ ಬರುವಂತಹ ಬಣ್ಣ ಬಣ್ಣದ ಹಾಗೂ ಮನಸೆಳೆಯುವ ಜಾಹಿರಾತುಗಳನ್ನು ನೋಡಿ ಅದರ ಮೋಡಿಗೆ ಒಳಗಾಗಿ ಅವುಗಳು ನಮಗೂ ಬೇಕು ಎಂದು ಆಸೆ ಪಟ್ಟು ಅವುಗಳನ್ನು ಖರೀದಿಸುವ ಗೀಳಿಗೆ ಬೀಳಬೇಡಿ. ಹಾಗೇನಾದರೂ ಮಾಡಲು ಹೊರಟರೆ ನಮ್ಮ ಜೇಬಿಗೆ ಅನಾವಶ್ಯಕ ಕತ್ತರಿ ಬೀಳುವುದಂತೂ ಗ್ಯಾರಂಟಿ. ಖರೀದಿಗೂ ಮುನ್ನ ಸಾಕಷ್ಟು ವಿಮರ್ಷೆಯನ್ನು ಮಾಡಿ ಅವುಗಳ ಖರೀದಿಯ ಅವಶ್ಯಕತೆ ಇದೆಯೇ ಎಂದು ಚಿಂತಿಸಿ ತೀರಾ ಅವಶ್ಯಕವೆನಿಸಿದಲ್ಲಿ ಮಾತ್ರ ಖರೀದಿಸಿ. ಇಂತಹ ‘ಕೊಳ್ಳುಬಾಕ ಸಂಸ್ಕೃತಿ’ಯಿಂದ ಭವಿಷ್ಯದ ಜೀವನಕ್ಕೆ ಗಡಾಂತರ ಕಟ್ಟಿಟ್ಟ ಬುತ್ತಿ.
ಶುಭ ಸಮಾರಂಭಗಳ ಖರ್ಚಿನ ಮೇಲೆ ಹಿಡಿತವಿರಲಿ
‘ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು’ ಎಂಬ ನಾಣ್ಣುಡಿಯೇ ಇದೆ. ಅಂದರೆ ಒಂದು ಮನೆಯನ್ನು ಕಟ್ಟುವಾಗ ಅದರ ಖರ್ಚು ಅದೆಷ್ಟು ಹೋಗುತ್ತೋ ಹೇಳಲು ಅಸಾಧ್ಯ. ಅದೇ ರೀತಿ ಮದುವೆಗಾಗಿ ಅದೆಷ್ಟೇ ಖರ್ಚು ಮಾಡಿದರೂ ಅದು ಮರಳಿ ಬರುವ ಹಣವಲ್ಲ. ಎಷ್ಟು ಅದ್ದೂರಿಯಾಗಿ ಮದುವೆ ಮಾಡಿದರೂ ಮದುವೆಗೆ ಬಂದ ಅತಿಥಿಗಳು ಹೊಟ್ಟೆ ತುಂಬಾ ಉಂಡು ಎನಾದರೊಂದು ಕೊಂಕು ಮಾತನಾಡಿಯೇ ಆಡುತ್ತಾರೆ. ಮನೆಯಲ್ಲಿ ನಡೆಯುವ ವಿವಿಧ ಸಮಾರಂಭಗಳು ಮತ್ತಿತರ ಶುಭಕಾರ್ಯಗಳನ್ನು ಆದಷ್ಟು ಕಡಿಮೆ ಖರ್ಚಿನಲ್ಲಿ ಮಾಡಿ ಮುಗಿಸುವುದು ಉತ್ತಮ. ಸಾಮೂಹಿಕ ವಿವಾಹಗಳಲ್ಲಿ ಮತ್ತು ಸರಳ ವಿವಾಹಗಳನ್ನು ಮಾಡುವುದರಿಂದ ಕೇವಲ ಉಳಿತಾಯ ಮಾತ್ರವಲ್ಲ ಭವಿಷ್ಯದ ದೊಡ್ಡದಾದ ಹೊರೆಯಿಂದಲೇ ಹೊರಬಂದಂತೆ.
ಕ್ರೆಡಿಟ್ ಕಾರ್ಡ್ ಬಳಕೆಗೆ ಪ್ರಾಶಸ್ತ್ಯ ನೀಡಿರಿ
ಇಂದಿನ ದಿನವು ಡಿಜಿಟಲ್ ಯುಗವಾಗಿದ್ದು, ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರಕಾರವೂ ಪ್ರೋತ್ಸಾಹ ನೀಡುತ್ತಿದ್ದು, ಜನಧನ್ ಖಾತೆಗಳ ಮೂಲಕ ಪ್ರತಿಯೊಬ್ಬ ನಾಗರೀಕರೂ ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ನಗದು ರಹಿತ ವ್ಯವಹಾರಕ್ಕೆ ಆದ್ಯತೆಯನ್ನು ನೀಡಲಾಗುತ್ತಿದೆ. ಈ ಮೂಲಕ ಕ್ರೆಡಿಟ್ ಕಾರ್ಡ್ಗಳನ್ನು ಬಳಸುತ್ತಿದ್ದಲ್ಲಿ ಯಾವುದೇ ವಸ್ತುಗಳ ಖರೀದಿ ಹಾಗೂ ಯಾವುದೇ ಬಿಲ್ಲುಗಳನು ಪಾವತಿಸುವ ಸಂದರ್ಭಗಳಲ್ಲಿ ‘ಕ್ಯಾಶ್ ಬ್ಯಾಕ್’ ಅವಕಾಶಗಳಿದ್ದಲ್ಲಿ ಖಂಡಿತವಾಗಿಯೂ ಅವುಗಳನ್ನು ಬಸಿಕೊಳ್ಳಿರಿ.
ದುಷ್ಚಟಗಳ ದಾಸರಾಗಿದ್ದಲ್ಲಿ ಅವುಗಳಿಂದ ಹೊರಬನ್ನಿ
ಬೀಡಿ, ಸಿಗರೇಟು, ಸಾರಾಯಿ, ಗುಟ್ಕಾ ಇವುಗಳೇನು ನಮ್ಮ ಜೀವನಕ್ಕೆ ಅವಶ್ಯಕವಾದವುಗಳಲ್ಲ ಹಾಗೂ ಇವುಗಳ ಬಳಕೆ ಸಮಾಜದಲಿ ವ್ಯಕ್ತಿಯ ಗೌರವವನ್ನು ಕುಂಟಿತಗೊಳ್ಳಿಸುತ್ತದೆಯೇ ವಿನಃ ಇವುಗಳಿಂದ ಯಾವುದೇ ರೀತಿಯ ಹೆಸರನ್ನಂತೂ ತಂದುಕೊಡಲಾರವು. ಲಾಭದಾಯಕವಲ್ಲದ ಇವುಗಳನ್ನು ತ್ಯಜಿಸುವುದರಿಂದ ನಮ್ಮ ಸಂಸಾರದ ಆದಾಯವೆಂಬ ಮಡಿಕೆಯಲ್ಲಿ ಬಿದ್ದಿರುವ ಸೋರಿಕೆಯೆಂಬ (ಖರ್ಚು) ರಂದ್ರವನ್ನು ಮುಚ್ಚಿದಂತೆ ಆಗುವುದಲ್ಲದೇ ಪರೋಕ್ಷವಾಗಿ ಉಳಿತಾಯ ಮಾಡುವ ನೇರ ಮಾರ್ಗವಾಗಿದೆ.
