ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಾಯಣದಲ್ಲಿ ಆದರ್ಶ ಆಡಳಿತ, ಆದರ್ಶ ರಾಜ ಹೇಗಿರಬೇಕು ಸೇರಿದಂತೆ ಜೀವನಕ್ಕೆ ಸಂಬಂಧಿಸಿದ ಜೀವನ ಮೌಲ್ಯಗಳಿರುವದರಿಂದಾಗಿ ವಾಲ್ಮೀಕಿ ರಾಮಾಯಣವು ಒಂದು ಸಾಂಸ್ಕ್ರತಿಕ ಸಂವಿಧಾನವಾಗಿದೆ ಎಂದರೆ ತಪ್ಪಾಗಲಾರದು ಎಂದು ಮಡಿಕೇಶ್ವರ ಪ್ರೌಢಶಾಲೆಯ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ರಾಮಾಯಣದಲ್ಲಿರುವ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಾಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿವೆ ಎಂದರು.
ನಂದಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸತ್ಯಜೀತ ಪಾಟೀಲ ಮಾತನಾಡಿ, ಜಗತ್ತಿಗೆ ವಾಲ್ಮೀಕಿ ರಚಿಸಿರುವ ರಾಮಾಯಣವು ಪ್ರತಿಯೊಬ್ಬರೂ ಪರಿವರ್ತನೆ ಮಾಡಿಕೊಳ್ಳಲು ಪೂರಕವಾಗಿದೆ. ಈ ಮಹಾಕಾವ್ಯ ಎಲ್ಲ ಸಮಾಜಕ್ಕೂ ಅಗತ್ಯವಿದೆ. ಪರಿವರ್ತನೆ ಯಾರ ಸ್ವತ್ತಲ್ಲ. ಇಡೀ ವಿಶ್ವಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ಉಪಾಧ್ಯಕ್ಷ ಅಶೋಕ ಹಾರಿವಾಳ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.

