ಬಸವನಬಾಗೇವಾಡಿ: ಹಂಡೆವಜೀರ ಸಮಾಜದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಮ್ಮ ಸಂಘದ ಜಿಲ್ಲಾ, ತಾಲೂಕು ಘಟಕ ಹಾಗೂ ಕಲಬುರಗಿಯ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಸಹಯೋಗದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ಗ್ರಂಥ ಬಿಡುಗಡೆ ಹಾಗೂ ಸಮಾಜದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸುವ ಸಮಾರಂಭವನ್ನು ಅ.8 ರಂದು ಬೆಳಗ್ಗೆ 11 ಗಂಟೆಗೆ ಇಂಡಿ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ ಹೇಳಿದರು.
ಪಟ್ಟಣದ ಸಿದ್ಧರಾಮೇಶ್ವರ ಪತ್ತಿನ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ ಬಾಂಧವರು ಸಂಘಟಿತರಾಗಿ 2004 ರಿಂದ ಹತ್ತು ವರ್ಷಕೊಮ್ಮೆ ರಾಜ್ಯ ಮಟ್ಟದ ಸಮ್ಮೇಳನ, ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಹಂಡೆವಜೀರ ಸಮಾಜದ ಅರಸು ಹನುಮಪ್ಪ ನಾಯಕರ ಜಯಂತಿಯನ್ನು ಪ್ರತಿ ವರ್ಷ ಏ.9 ರಂದು ಸರ್ಕಾರಿ ಕಾರ್ಯಕ್ರಮನ್ನಾಗಿ ಆಚರಣೆ ಮಾಡುವುದರೊಂದಿಗೆ ರಾಜ್ಯ ಪಠ್ಯ ಪುಸ್ತಕದಲ್ಲಿ ಅವರ ಚರಿತ್ರೆ ಅಳವಡಿಸಬೇಕು ಎಂದು ಆಗ್ರಹಿಸಿ ಹಿಂದಿನ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಪ್ಪಿನ ಬಸವಲಿಂಗ ಸ್ವಾಮೀಜಿ, ವಿಶ್ವಪ್ರಭುದೇವರು ಶಿವಾಚಾರ್ಯ ಸ್ವಾಮೀಜಿ, ವೃಷಭಲಿಂಗ ಸ್ವಾಮೀಜಿ, ಮುರಘೇಂದ್ರ ಶಿವಾಚಾರ್ಯರು, ಶಿವಕುಮಾರ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು, ಸಚಿವ ಶಿವಾನಂದ ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಗ್ರಂಥ ಬಿಡುಗಡೆ ಮಾಡುವರು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘಟನೆ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ಶಿವಕುಮಾರ ಪಾಟೀಲ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಸಂಘಟನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ, ಯುವ ಘಟಕದ ಅಧ್ಯಕ್ಷ ಸಂಗನಗೌಡ ಯಂಕಂಚಿ,ತಾಲೂಕಾಧ್ಯಕ್ಷ ಸಿದ್ದನಗೌಡ ಪಾಟೀಲ, ಪದಾಧಿಕಾರಿಗಳಾದ ಪ್ರಭು ಬೆಳ್ಳಿ, ರುದ್ರಗೌಡ ಪಾಟೀಲ, . ಎಸ್.ಜಿ.ಪಾಟೀಲ, ಪ್ರೇಮಕುಮಾರ ಮ್ಯಾಗೇರಿ, ದೇವೇಂದ್ರ ಗೋನಾಳ, ಶೇಖರಗೌಡ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment