ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಂವಹನ ಕೌಶಲ್ಯ ಪ್ರತಿಯೊಬ್ಬರ ವೃತ್ತಿಪರ ಜೀವನದ ಅವಿಭಾಜ್ಯ ಅಂಶವಾಗಿದೆ. ಯಾವುದೇ ಕ್ಷೇತ್ರದಲ್ಲಿರಲಿ, ಯಶಸ್ಸನ್ನು ಸಾಧಿಸಲು ಕೇವಲ ವಿಷಯಜ್ಞಾನ ಮಾತ್ರ ಸಾಕಾಗದೆ, ಸರಿಯಾದ ರೀತಿಯಲ್ಲಿ ಮಾತನಾಡುವ, ಆಲಿಸುವ ಹಾಗೂ ಅಭಿವ್ಯಕ್ತಗೊಳ್ಳುವ ಕೌಶಲ್ಯಗಳು ಅತ್ಯಂತ ಅಗತ್ಯವಾಗಿವೆ ಎಂದು ಮಹಿಳಾ ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ.ರಾಜು ಬಾಗಲಕೋಟ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಇಂಗ್ಲಿಷ್ ಅಧ್ಯಯನ ವಿಭಾಗ ಮತ್ತು ವಿಜಯಪುರದ ನವಬಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ, ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರ, ಮತ್ತು ಕರ್ನಾಟಕ ಸರ್ಕಾರ ಉನ್ನತ ಶಿಕ್ಷಣ ಮಂಡಳಿಯ ಅನುದಾನದ ಅಡಿಯಲ್ಲಿ ಇತ್ತಿಚಿಗೆ ನಡೆದ “ವೃತ್ತಿ ಕೌಶಲ್ಯವಾಗಿ ಸಂವಹನ” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಿಕೊಳ್ಳಲು ಸಂವಹನ ಕೌಶಲ್ಯಗಳ ಅಭ್ಯಾಸ ಅತ್ಯಂತ ಮುಖ್ಯವಾಗಿದೆ. ಭಾಷೆಯ ಜತೆಗೆ ಹಾವಭಾವ, ಮುಖಚರ್ಯೆ, ಮಾತಿನ ಶೈಲಿ, ಧ್ವನಿಯ ಟೋನ್ ಮೊದಲಾದ ಅಂಶಗಳು ಸಮಾನವಾಗಿ ಪ್ರಭಾವ ಬೀರುತ್ತವೆ. ಸಂವಹನ ಕೌಶಲ್ಯಗಳು ಉತ್ತಮವಾಗಿದ್ದರೆ, ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚುವುದು, ಸಾಮಾಜಿಕ ಸಂಪರ್ಕ ಬಲವಾಗುವುದು ಮತ್ತು ಉದ್ಯೋಗಾವಕಾಶಗಳೂ ಕೂಡ ಹೆಚ್ಚಾಗುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನವಬಾಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಮೋಘಸಿದ್ದ ಹಂಜಗಿ ಮಾತನಾಡಿ, ಉತ್ತಮ ಸಂವಹನ ಕೌಶಲ್ಯವು ಜೀವನದಲ್ಲಿ ಪರಿಪಕ್ವತೆ ಹಾಗೂ ಪರಿಪೂರ್ಣತೆಯನ್ನು ತಂದುಕೊಡುತ್ತದೆ. ಸಂವಹನ ಕೌಶಲ್ಯವು ಕೇವಲ ಮಾತಿನ ಶೈಲಿ ಮಾತ್ರವಲ್ಲ, ಅದು ವ್ಯಕ್ತಿಯ ಆಲೋಚನೆ, ನಡವಳಿಕೆ ಮತ್ತು ವ್ಯಕ್ತಿತ್ವದ ಪ್ರತಿಬಿಂಬವಾಗಿದೆ ಎಂದು ಹೇಳಿದರು.
ಕಾರ್ಯಗಾರದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಂಶೋದನಾ ವಿದ್ಯಾರ್ಥಿಗಳು, ಬೋದಕ ಹಾಗೂ ಬೋದಕೇತರ ಸಿಬ್ಬಂದಿಗಳು, ಮತ್ತು ಉಪಸ್ಥಿತರಿದ್ದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಪ್ರಕಾಶ ಹಾವೇರಿಪೇಟ ಸ್ವಾಗತಿಸಿದರು, ಇಂಗ್ಲಿಷ್ ಅಧ್ಯಾಯನ ವಿಭಾಗದ ಡಾ. ದೀಪಕ್ ಶಿಂದೆ ವಂದಿಸಿದರು,
ಕಾರ್ಯಕ್ರಮದ ಅಂಗವಾಗಿ ಮೂರು ಗೋಷ್ಠಿಗಳನ್ನು ಆಯೋಜಿಸಲಾಯಿತು.
ಪ್ರಥಮ ಗೋಷ್ಠಿಯಲ್ಲಿ ದಾಂಡೇಲಿಯ ಬಿ.ಎನ್. ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಆರ್.ಜಿ. ಹೆಗಡೆ ಅವರು “ಸೂಕ್ಷ್ಮ ಕೌಶಲ್ಯಗಳು, ನಾಯಕತ್ವ ಹಾಗೂ ಸಂವಹನ ಕೌಶಲ್ಯ” ವಿಷಯ ಕುರಿತು ಉಪನ್ಯಾಸ ನೀಡಿದರು.
ಎರಡನೇ ಗೋಷ್ಠಿಯಲ್ಲಿ ಕರ್ನಾಟಕ ಮಹಾವಿದ್ಯಾಲಯ, ಧಾರವಾಡದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಜಾಡರ್ ಅವರು “ಅಮೌಖಿಕ ಸಂವಹನದ ಪ್ರಾಮುಖ್ಯತೆ” ಕುರಿತು ಮಾತನಾಡಿದರು.
ತೃತೀಯ ಗೋಷ್ಠಿಯಲ್ಲಿ ಸಿಂಧನೂರಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಹಿರಿಯ ಪ್ರಾಧ್ಯಾಪಕ ಮತ್ತು ವಿಶೇಷ ಅಧಿಕಾರಿ ಪ್ರೊ. ಪಿ. ಕಣ್ಣನ್ ಅವರು “ಇಂಗ್ಲಿಷ್ ಭಾಷೆಯಲ್ಲಿನ ಔಪಚಾರಿಕ ಹಾಗೂ ಅನೌಪಚಾರಿಕ ಸಂವಹನ” ವಿಷಯದ ಕುರಿತು ಉಪನ್ಯಾಸ ನೀಡಿದರು.

