ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಯುವ ಸಬಲೀಕರಣ ಮಂತ್ರಾಲಯ ಕೊಡಮಾಡುವ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಮೈ ಭಾರತ ರಾಷ್ಟ್ರೀಯ ಸೇವಾ ಯೋಜನೆ ರಾಷ್ಟ್ರಪತಿ ಪ್ರಶಸ್ತಿಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತೆಲಗಿಯ ಯುವ ಪ್ರತಿಭೆ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಅವರಿಗೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಪ್ರಧಾನ ಮಾಡಿ ಗೌರವಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಅಪೂರ್ವ ಕಾರ್ಯಕ್ರಮದಲ್ಲಿ ಸಂಜಯಕುಮಾರ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕೇಂದ್ರ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮನ್ಸೂಖ್ ಮಾಂಡವೀಯ, ಸಂಸದೆ ರಕ್ಷಾ ಖಡಸೆ, ರಾಷ್ಟ್ರೀಯ ಸೇವಾ ಯೋಜನೆ ನಿರ್ದೇಶಕಿ ವಂದಿತಾ ಶರ್ಮಾ, ಯುವ ಸಬಲೀಕರಣ ಕ್ರೀಡಾ ಇಲಾಖೆ ಜಂಟಿ ನಿರ್ದೇಶಕ ನಿತೇಶಕುಮಾರ ಮಿಶ್ರಾ ಈ ವೇಳೆ ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನದ ವೇಳೆ ಸಂಜಯಕುಮಾರ ಅವರ ಕೈಗೊಂಡ ರಕ್ತದಾನ, ಸಾವಿರಾರು ಸಸಿಗಳನ್ನು ನೆಡುವ ಕಾರ್ಯ, ಕೇಂದ್ರ ಪುರಸ್ಕೃತ ಯೋಜನೆಗಳ ಜಾಗೃತಿ ಕಾರ್ಯಗಳ ಕುರಿತು ನಿರೂಪಕರು ವಿವರಿಸಿದರು. ನಂತರ ರಾಷ್ಟ್ರಪತಿಗಳು ಸಂಜಯಕುಮಾರ ಅವರಿಗೆ ಪದಕ ಪ್ರಧಾನ ಮಾಡಿ ಅಭಿನಂದಿಸಿದರು.
ಸಂಜಯಕುಮಾರ ಅವರ ತಂದೆ, ತಾಯಿ ಈ ಅಪೂರ್ವ ಕ್ಷಣಗಳಿಗೆ ಸಾಕ್ಷಿ ಯಾದರು.
ಪ್ರಶಸ್ತಿ ಸ್ವೀಕರಿಸಿದ ನಂತರ ಅನಿಸಿಕೆ ಹಂಚಿಕೊಂಡ ಸಂಜಯಕುಮಾರ ಬಿರಾದಾರ, ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣ, ರಾಷ್ಟ್ರಪತಿಗಳ ಅಮೃತ ಹಸ್ತದಿಂದ ಪ್ರಶಸ್ತಿ ಪಡೆಯುವ ನನ್ನ ಕನಸು ಈಡೇರಿದೆ, ಇದಕ್ಕೆಲ್ಲ ನನ್ನ ತಂದೆ, ತಾಯಿ, ಗುರುವೃಂದ, ಸ್ನೇಹಬಳಗದ ಹಾರೈಕೆಯೇ ಕಾರಣ, ಈ ಪ್ರಶಸ್ತಿ ನನಗೆ ಇನ್ನಷ್ಟೂ ಜವಾಬ್ದಾರಿ ಹೆಚ್ಚಿಸಿದೆ, ಇನ್ನೂ ಪರಿಣಾಮಕಾರಿಯಾಗಿ ಸೇವೆ ಮಾಡುವ ಹುಮ್ಮಸ್ಸು ಹೆಚ್ಚಿಸಿದೆ, ಸೇವೆಯಲ್ಲಿ ಸಂತೋಷ ಕಾಣೋಣ ಎಂದರು.
ಮಹಾರಾಷ್ಟ್ರ, ತಮಿಳುನಾಡು, ಗೋವಾ, ಕೇರಳ ಸೇರಿದಂತೆ ದಕ್ಷಿಣ ಭಾರತದಿಂದ ಈ ಪ್ರಶಸ್ತಿಗೆ ಸಂಜಯಕುಮಾರ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಸಂಜಯಕುಮಾರ ಬಿರಾದಾರ ಈ ಹಿಂದೆ ಪ್ರತಿಷ್ಠಿತ ಕಾಮನ್‌ವೆಲ್ತ್ ಯೂಥ್ ಕ್ಲೈಮೇಟ್ ಚೇಂಜ್ ನೆಟವರ್ಕ್ ಇಂಡಿಯಾದ ಯೂಥ್ ಲೀಡರ್ ಆಗಿ ನೇಮಕಗೊಂಡಿದ್ದರು.
ಮೂಲತಃ ವಿಜಯಪುರ ಜಿಲ್ಲೆಯ ಪುಟ್ಟ ಗ್ರಾಮ ತೆಲಗಿಯರವಾದ ಸಂಜಯಕುಮಾರ ರಾಷ್ಟ್ರದ ಮಟ್ಟದಲ್ಲಿ ಸಾಮಾಜಿಕ ಸೇವೆ ಗುರುತಿಸಿಕೊಂಡಿದ್ದಾರೆ.

